ಚಿಕ್ಕಮಗಳೂರು : ರಾತ್ರೋರಾತ್ರಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು…

295
firstsuddi

ಚಿಕ್ಕಮಗಳೂರು : ರಾತ್ರೋರಾತ್ರಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದ ಲಕ್ಷ್ಮಿಪುರದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದು, ತಹಶೀಲ್ದಾರ್ ನೇತೃತ್ವದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ. ಲಕ್ಷ್ಮಿಪುರದ ಸರ್ವೆ ನಂಬರ್ 52ರಲ್ಲಿ 280 ಎಕರೆ ಗೋಮಾಳ ಜಾಗವಿದ್ದು, ಇದೇ ಜಾಗದಲ್ಲಿ ಖಲಂದರ್ ಎಂಬುವರು ನೂರು ಎಕರೆಗೆ ಬೇಲಿ ಹಾಕಿಕೊಂಡು ಸಿಲ್ವರ್ ಗಿಡ ನೆಟ್ಟಿದ್ದರು. ವಿಷಯ ತಿಳಿದ ಸ್ಥಳಿಯರು ನಮಗೂ ಜಮೀನು-ಮನೆ ಏನೂ ಇಲ್ಲ. ನಮಗೂ ಎರಡು ಎಕರೆ ಜಾಗ ಹಾಗೂ ನಿವೇಶನ ಕೊಡಿ ಎಂದು ಗೋಮಾಳದಲ್ಲಿ ಟೆಂಟ್ ನಿರ್ಮಿಸಿಕೊಂಡು ಅಲ್ಲೇ ವಾಸಿವಿದ್ದರು. ಅರಣ್ಯ ಅಧಿಕಾರಿಗಳು ನಾಲ್ಕು ದಿನಗಳಿಂದ ಪ್ರತಿಭಟನಾಕಾರರ ಮನವೊಲಿಸಿದರು.

ಚುನಾವಣೆ ನಡೆಯುತಿದ್ದ ಕಾರಣ ಸುಮ್ಮನಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಇಂದು ತಹಶೀಲ್ದಾರ್ ನಂದಕುಮಾರ್ ನೇತೃತ್ವವದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನ ತೆರವುಗೊಳಿಸಿ ಅಲ್ಪಸಂಖ್ಯಾತರ ಮಹಿಳಾ ವಸತಿ ನಿಲಯಕ್ಕೆ ತಂದಿಟ್ಟಿದ್ದಾರೆ. ಇದೇ ವೇಳೆ, ಮಹಿಳೆಯರು ಅಂಬೇಡ್ಕರ್ ಅವರ ಪ್ರತಿಮೆಯನ್ನು ತಬ್ಬಿಕೊಂಡು ನಮ್ಮನ್ನು ಇಲ್ಲೆ ಸಾಯಿಸಿ ಪ್ರತಿಮೆ ತೆರವಿಗೆ ಬಿಡೋದಿಲ್ಲ ಎಂದು ಗೋಳಿಟ್ಟಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂತೋಷ್ ವಿರುದ್ಧ ಅಂಬೇಡ್ಕರ್ ಅವರ ಪ್ರತಿಮೆ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ದೂರು ದಾಖಲಾಗಿದೆ.