ಚಿಕ್ಕಮಗಳೂರು : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ದೈಹಿಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಪ್ರಭು ನಾಯಕ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಘಟನೆ ಸಂಬಂಧ ಬಿಇಓ ಪೊಲೀಸರಿಗೆ ದೂರು ನೀಡಿದ್ದರು. ಇತ್ತ ದೂರು ನೀಡುತ್ತಿದ್ದಂತೆಯೇ ಶಿಕ್ಷಕ ತಲೆಮರೆಸಿಕೊಂಡಿದ್ದ.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಈ ಮಧ್ಯೆ ಎಎಸ್ ಪಿ ಶೃತಿ ಅವರ ನೇತೃತ್ವದ ತಂಡ ತನಿಖೆಯ ಸಲುವಾಗಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ತನಿಖಾ ವರದಿಯನ್ನು ಎಸ್‍ಪಿ ಅಕ್ಷಯ್ ಅವರು ಪರಿಶೀಲನೆ ನಡೆಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಿದ್ದರು.
ಘಟನೆ ಕುರಿತು ಚುರುಕಾಗಿ ಕಾರ್ಯಾಚರಣೆ ಕೈಗೊಂಡು ಶಿಕ್ಷಕನಿಗಾಗಿ ಶೋಧ ನಡೆಸಿದ್ದ ಪೊಲೀಸರು ಖಚಿತ ಮಾಹಿತಿ ಆಧರಿಸಿ ತರೀಕೆರೆಯಲ್ಲಿ ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ಈಗಾಗಲೇ ಶಿಕ್ಷಕನ ಮೇಲೆ 11 ಎಫ್ ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.










