ಚಿಕ್ಕಮಗಳೂರು : ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರೌಢಶಾಲಾ ಶಿಕ್ಷಕರ ತರಬೇತಿ ಕಾರ್ಯಾಗಾರಗಳನ್ನು ಪ್ರತಿವರ್ಷ ಆಗಸ್ಟ್ ತಿಂಗಳೊಳಗೆ ಮುಗಿಸಬೇಕು ಎಂದು ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆಸಿಂತಾ ಅನಿಲ್‍ಕುಮಾರ್ ಸಲಹೆ ಮಾಡಿದರು.
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಾಜವಿಜ್ಞಾನ ಶಿಕ್ಷಕರ ವೇದಿಕೆ ನಗರದ ಸಂತ ಜೋಸೇಫರ ಬಾಲಕರ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷ ಆಗಸ್ಟ್ ತಿಂಗಳ ನಂತರ ವಿದ್ಯಾರ್ಥಿಗಳ ಪರೀಕ್ಷಾ ತಯಾರಿ ಅರಂಭಗೊಳ್ಳುತ್ತದೆ, ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಿನಲ್ಲಿ ಶಿಕ್ಷಣ ಇಲಾಖೆ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಿದರೆ ವಿದ್ಯಾರ್ಥಿಗಳಿಗೆ ಪಾಠಮಾಡಲು ಶಿಕ್ಷಕರಿಲ್ಲದಂತಾಗುತ್ತದೆ ಎಂದರು.
ಪರೀಕ್ಷೆಗಳು ಹತ್ತಿರವಾಗುವ ಸಂದರ್ಭದಲ್ಲಿ ಶಿಕ್ಷಕರು ತರಬೇತಿಗಾಗಿ ಪದೇಪದೇ ವಾರಗಟ್ಟಲೆ ಹೋದರೆ ಬಡ ವಿದ್ಯಾರ್ಥಿಗಳ ಪಾಡೇನು ಎಂದು ಪ್ರಶ್ನಿಸಿದ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಇದನ್ನು ಅರ್ಥಮಾಡಿಕೊಳ್ಳಬೇಕು, ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಕಡಿತಗೊಳಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಈ ಸಂಬಂಧ ಚರ್ಚಿಸಿ ಈಗಿನ ವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಮುಂಡಾಜೆ ಮುರಾರ್ಜಿ ದೇಸಾಯಿ ಪ್ರೌಢಶಾಲೆಯ ಶಿಕ್ಷಕ ಅರವಿಂದ ಚೊಕ್ಕಾಟಿ ಮಾತನಾಡಿ ಸಮಾಜವಿಜ್ಞಾನ ಶಿಕ್ಷಕರು ಬರೀ ಪ್ರಶ್ನೋತ್ತರಕ್ಕೆ ಸೀಮಿತವಾಗದೇ ಸಮಾಜವಿಜ್ಞಾನ ವಿಷಯದಲ್ಲಿರುವ ಸ್ವಾರಸ್ಯಕರ ವಿಷಯಗಳನ್ನು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಬೋಧಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಜಿ.ಬಿ.ಸುರೇಶ್ ಸಮಾಜವಿಜ್ಞಾನ ಶಿಕ್ಷಕರ ಬೋಧನಾ ಸಾಮಥ್ರ್ಯವನ್ನು ಹೆಚ್ಚಿಸಿ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಅವರನ್ನು ತಯಾರುಗೊಳಿಸುವ ನಿಟ್ಟಿನಲ್ಲಿ ಸಮಾಜವಿಜ್ಞಾನ ಶಿಕ್ಷಕರ ವೇದಿಕೆಯನ್ನು ಸ್ಥಾಪಿಸಲಾಗಿದೆ ಎಂದರು.
ವೇದಿಕೆಯ ಸಹಕಾರ್ಯದರ್ಶಿ ಪಾಲಾಕ್ಷ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪಾಧ್ಯಕ್ಷೆ ಸಿ.ಎಂ.ಜ್ಯೋತಿ, ಖಜಾಂಚಿ ಪ್ರತಿಭಾ ನೆಲೋಗಲ್, ಮುರಾರ್ಜಿ ಶಾಲೆಯ ಪ್ರಾಂಶುಪಾಲ ಲೋಕೇಶ್ವರಾಚಾರ್, ಸಂತ ಜೋಸೇಫರ ಬಾಲಕರ ಪ್ರೌಢಶಾಲೆಯ ಮುಖ್ಯಶಿಕ್ಷಕ ಆಗ್ನೆಲ್ ಫರ್ನಾಂಡೀಸ್, ಶಿಕ್ಷಕ ಮಹಾದೇವ ಕುಂದರಗಿ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಶಿಕ್ಷಕರ ತರಬೇತಿ ಕಾರ್ಯಾಗಾರಗಳನ್ನು ಆಗಸ್ಟ್ ತಿಂಗಳೊಳಗೆ ಮುಗಿಸಬೇಕು :...










