ಚಿಕ್ಕಮಗಳೂರು : ಸಚಿವ ಸಿ.ಟಿ.ರವಿ ಅವರಿಗೆ ದತ್ತಪೀಠದ ಬಗ್ಗೆ ನಿಜವಾದ ಕಾಳಜಿ ಮತ್ತು ಬದ್ದತೆಯಿದ್ದಲ್ಲಿ ಪೀಠದ ವಿವಾದವನ್ನು ಅವರು ತಕ್ಷಣ ಪರಿಹರಿಸಲಿ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಹೇಳಿದರು.
ನಗರದ ಜೆಡಿಎಸ್ ಕಛೇರಿಯಲ್ಲಿ ಶುಕ್ರವಾರ ನಡೆದ ಯುವ ಜನತಾದಳದ ಜಿಲ್ಲಾ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ದತ್ತಪೀಠದ ಹೆಸರಿನಲ್ಲಿ ಯುವಜನತೆಯನ್ನು ಭಾವನಾತ್ಮಕವಾಗಿ ಕೆರಳಿಸುವುದು, ಮಾಲೆ ಹಾಕಿಕೊಂಡು ಪೀಠಕ್ಕೆ ತೆರಳುವುದರಿಂದ ಯಾವುದೇ ಪ್ರಯೋಜನವಿಲ್ಲ, ವಿವಾದದ ಚೆಂಡು ಇದೀಗ ರವಿಯವರ ಕಾಲಬುಡದಲ್ಲಿದೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅವರದೇ ಸರ್ಕಾರವಿದೆ, ರವಿಯವರು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ, ಈಗ ಅವರಿಗೆ ಎಲ್ಲಾ ರೀತಿಯ ಶಕ್ತಿಯೂ ಇದೆ ಹಾಗಾಗಿ ವಿವಾದವನ್ನು ಅವರು ಈಗಲೇ ಸೌಹಾರ್ದಯುತವಾಗಿ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಮಾತನಾಡಿ ಜನವರಿ ತಿಂಗಳ ಅಂತ್ಯದೊಳಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪಕ್ಷದ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವಜನತಾದಳದ ಜಿಲ್ಲಾಧ್ಯಕ್ಷ ವಿನಯ್‍ರಾಜ್ ಒಂದು ತಿಂಗಳೊಳಗೆ ಜಿಲ್ಲಾದ್ಯಂತ ಪಕ್ಷದ ಯುವಘಟಕಗಳನ್ನು ರಚಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಬೆಳೆಸಲು ತಮಗೆ ಸಹಕಾರ ನೀಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು, ಯುವಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ವಿನಯ್‍ರಾಜ್ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಬದಲಾದ ಸನ್ನಿವೇಶದಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಬಲಗೊಳಿಸುವ ಕುರಿತು ಸಭೆಯಲ್ಲಿ ವ್ಯಾಪಕವಾಗಿ ಚರ್ಚಿಸಲಾಯಿತು, ಜಿಲ್ಲಾ ಯುವ ಜನತಾದಳದ ಮಾಜಿ ಅಧ್ಯಕ್ಷ ವಿನಯ್ ಕೋಟೆ, ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್, ಪ್ರಧಾನ ಕಾರ್ಯದರ್ಶಿ ಯು.ಸಿ.ರಮೇಶ್, ವಸ್ತಾರೆ ಗ್ರಾ.ಪಂ. ಅಧ್ಯಕ್ಷ ರವಿ, ಪಕ್ಷದ ಮುಖಂಡರಾದ ಡಿ.ಆರ್.ಕುಶ, ಸಂದೀಪ್, ಜಯಂತಿ, ರವಿಕುಮಾರ್, ಹುಣಸೇಮಕ್ಕಿ ಲಕ್ಷ್ಮಣ್, ಪದ್ಮಯ್ಯ, ರಂಜನ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸಚಿವ ಸಿ.ಟಿ.ರವಿ ಅವರಿಗೆ ದತ್ತಪೀಠದ ಬಗ್ಗೆ ನಿಜವಾದ ಕಾಳಜಿ ಮತ್ತು ಬದ್ದತೆಯಿದ್ದಲ್ಲಿ ಪೀಠದ...










