ಚಿಕ್ಕಮಗಳೂರು : ಬದುಕುವ ರೀತಿ, ನೀತಿ, ಜೀವನದ ವಾಸ್ತವ ಮತ್ತು ಜ್ಞಾನವನ್ನು ಬೆಳೆಸುವಂತಹ ಶಿಕ್ಷಣ ದೇಶಕ್ಕೆ ಇಂದು ಅತ್ಯಗತ್ಯವಾಗಿದೆ ಎಂದು ಸಾಹಿತಿ ಡಾ|| ಬೆಳವಾಡಿ ಮಂಜುನಾಥ್ ಹೇಳಿದರು.
ನಗರದ ಶ್ರೀ ಗಾಯತ್ರಿದೇವಿ ಕಲ್ಯಾಣ ಮಂಟಪದಲ್ಲಿ ನಿನ್ನೆ ನಡೆದ ಸಮೃದ್ದಿ ಕಿಡ್ಸ್ ಕ್ರಿಯೇಟಿವಿಟಿ ಶಾಲೆಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಶಿಕ್ಷಣಕ್ಕೆ ನೀಡಿರುವಷ್ಟು ಮಹತ್ವ ಜಗತ್ತಿನ ಇನ್ಯಾವ ದೇಶಗಳಲ್ಲೂ ನೀಡಿಲ್ಲ, ಮುಂದುವರೆದ ರಾಷ್ಟ್ರಗಳು ಅಕ್ಷರ ಕಲಿಯಲು ಮುಂದಾಗುವ ಮುಂಚೆಯೇ ಭಾರತದಲ್ಲಿ ನಳಂದ ವಿಶ್ವವಿದ್ಯಾಲಯದಂತಹ ಲಕ್ಷಾಂತರ ಗುರುಕುಲಗಳು, ಶಿಕ್ಷಣ ಸಂಸ್ಥೆಗಳಿದ್ದವು, ಪ್ರಪಂಚದ ಮೂಲೆ ಮೂಲೆಯಿಂದ ಜನ ನಮ್ಮಲಿಗೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ಹೇಳಿದರು.
ಜಗತ್ತಿಗೆ ಶಿಕ್ಷಣ ನೀಡುತ್ತಿದ್ದ ಅತ್ಯಂತ ಉತ್ಕøಷ್ಠವಾಗಿದ್ದ ಭಾರತದ ಶಿಕ್ಷಣ ಇತ್ತೀಚಿನ ವರ್ಷಗಳಲ್ಲಿ ಕೆಳಮಟ್ಟಕ್ಕೆ ಬರುತ್ತಿದೆ ಇದಕ್ಕೆ ಮೂಲ ಕಾರಣ ಬದುಕಿಗೂ ಪಠ್ಯಕ್ಕೂ ವ್ಯತ್ಯಾಸವಿರುವುದು ಎಂದ ಅವರು ಬದುಕುವ ರೀತಿ, ನೀತಿ, ಜೀವನದ ವಾಸ್ತವ ಕಲಿಸುವ ಜ್ಞಾನವನ್ನು ವೃದ್ದಿಸುವ ಶಿಕ್ಷಣ ಇಂದು ದೊರೆಯುತ್ತಿಲ್ಲ ಎಂದು ವಿಷಾದಿಸಿದರು.
ವಿದ್ಯಾರ್ಥಿಗಳ ಮನಸ್ಸನ್ನು ಕೇಂದ್ರೀಕರಿಸಿ ಪಾಠ ಮಾಡುವುದು ಇಂದು ದೊಡ್ಡ ಸಮಸ್ಯೆಯಾಗಿದೆ, ಮಕ್ಕಳ ಮನಸ್ಸನ್ನು ಕೇಂದ್ರೀಕರಿಸುವುದು ಸವಾಲಾಗಿದೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಕೇವಲ ಉದ್ಯೋಗ ಪಡೆಯುವುದಕ್ಕಾಗಿದೆ, ಜ್ಞಾನಕ್ಕಾಗಿ ಅಲ್ಲ, ಇದರಿಂದಾಗಿ ನಮ್ಮ ಮಕ್ಕಳು ಕೇವಲ ಅಂಕ ಗಳಿಸುವ ಯಂತ್ರಗಳಾಗಿದ್ದಾರೆ ಎಂದು ತಿಳಿಸಿದರು.
ಬ್ರಾಹ್ಮಣ ಮಹಾಸಭಾದ ನಿರ್ದೇಶಕಿ ಜಯಶ್ರೀ ಪಿ.ಜೋಷಿ ಮಾತನಾಡಿ ಅನ್ನ ಕ್ಷಣಿಕ ತೃಪ್ತಿ ನೀಡುತ್ತದೆ ಆದರೆ ಶಿಕ್ಷಣ ನಮ್ಮ ಬದುಕನ್ನು ರೂಪಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮೃದ್ದಿ ಕಿಡ್ಸ್ ಕ್ರಿಯೇಟಿವಿಟಿ ಶಾಲೆಯ ಅಧ್ಯಕ್ಷ ಶಂಕರನಾರಾಯಣ ಭಟ್ ತಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಭಗವದ್ಗೀತೆ ಮತ್ತು ಯೋಗವನ್ನೂ ಕಲಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಂಶುಪಾಲೆ ಪೂಜ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು, ಸಮಾರಂಭದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ ಪೋಷಕರು ಶಾಲೆಯಲ್ಲಿ ದೊರೆಯುವ ಶಿಕ್ಷಣದ ಗುಣಮಟ್ಟವನ್ನು ಶ್ಲಾಘಿಸಿದರು.
ಸಮಾರಂಭದ ನಂತರ ಚಿಣ್ಣರಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.ಸಮೃದ್ದಿ ಕಿಡ್ಸ್ ಕ್ರಿಯೇಟಿವಿಟಿ ಸಂಸ್ಥೆಯ ಖಜಾಂಚಿ ಉಜ್ವಲ್ ಡಿ.ಪಡುಬಿದ್ರಿ, ಕಾರ್ಯದರ್ಶಿ ಆನಂದಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಬಾಲಕೃಷ್ಣರಾವ್, ರಾಜಾರಾಂ ಕೋಟೆ, ಶಿಕ್ಷಕರಾದ ನಮ್ರತ, ಮಮತ ಉಪಸ್ಥಿತರಿದ್ದರು.










