ಚಿಕ್ಕಮಗಳೂರು : ಸಂಕಷ್ಟದಲ್ಲಿರುವ ಶಾಮಿಯಾನ ಮಾಲೀಕರು ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ…

319
firstsuddi

ಚಿಕ್ಕಮಗಳೂರು : ಲಾಕ್‍ಡೌನ್‍ನಿಂದಾಗಿ ದುಡಿಮೆಯಿಲ್ಲದೆ ಸಂಕಷ್ಟದಲ್ಲಿರುವ ಶಾಮಿಯಾನ ಮಾಲೀಕರು ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಚಿಕ್ಕಮಗಳೂರು ಡೆಕೊರೇಟರ್ಸ್ ಲೈಟಿಂಗ್ಸ್, ಶಾಮಿಯಾನ ಮಾಲೀಕರು ಮತ್ತು ಕಾರ್ಮಿಕರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ಡಾ| ಕೆ.ಕುಮಾರ್ ಅವರನ್ನು ಬುಧವಾರ ಬೇಟಿ ಮಾಡಿದ ಸಂಘದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಲಾಕ್‍ಡೌನ್‍ನಿಂದಾಗಿ ಕಳೆದ 42 ದಿನಗಳಿಂದ ಶಾಮಿಯಾನ, ಧ್ವನಿ ಮತ್ತು ಬೆಳಕು, ಹೂವಿನ ಅಲಂಕಾರ ವೃತ್ತಿಯಲ್ಲಿರುವ ಮಾಲೀಕರು ಮತ್ತು ಕಾರ್ಮಿಕರು ಕೆಲಸವಿಲ್ಲದೆ ಆರ್ಥಿಕವಾಗಿ ಸೊರಗಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಈ ತಿಂಗಳುಗಳಲ್ಲಿ ಮದುವೆ, ಜಾತ್ರೆ, ರಥೋತ್ಸವ ಸೇರಿದಂತೆ ಅನೇಕ ಸಭೆ ಸಮಾರಂಭಗಳು ನಡೆಯಬೇಕಿತ್ತು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಅವುಗಳನ್ನು ರದ್ದುಗೊಳಿಸಿರುವುದರ ಪರಿಣಾಮ ಅದನ್ನೇ ನಂಬಿ ಬದುಕುವ ಶಾಮಿಯಾನ ಮಾಲೀಕರು, ಕಾರ್ಮಿಕರು ಕೆಲಸವಿಲ್ಲದೆ ಜೀವನ ನಿರ್ವಹಣೆ ಮಾಡಲು ಹೆಣಗಾಡುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಸಾಲಸೂಲ ಮಾಡಿ ಈ ವೃತ್ತಿಗೆ ಬಂಡವಾಳ ಹಾಕಿರುವ ಮಾಲೀಕರು ಮಾಡಿದ ಸಾಲ, ಕಟ್ಟಡದ ಬಾಡಿಗೆ, ತೆರಿಗೆ ಕಟ್ಟಲಾಗದೆ ಪರದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಶಾಮಿಯಾನ ಮಾಲೀಕರು ಮತ್ತು ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ಗೌರವಾಧ್ಯಕ್ಷ ಚಂದ್ರು, ಅಧ್ಯಕ್ಷ ಸದಾಶಿವ, ಉಪಾಧ್ಯಕ್ಷ ರಾಜೇಗೌಡ, ಪ್ರಧಾನ ಕಾರ್ಯದರ್ಶಿ ಆನಂದ್, ಸಹಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಪುನಿತ್, ನಿರ್ದೇಶಕ ಶ್ರೀದೇವಿ ಮೋಹನ್ ಹಾಜರಿದ್ದರು.