ಚಿಕ್ಕಮಗಳೂರು : ಎಪ್ಪತ್ತೈದನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷಾಚರಣೆ ಹಾಗೂ ರಥಸಪ್ತಮಿ ಅಂಗವಾಗಿ ನಗರದ ಬಿಜಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಬೋಧಕರು ಮತ್ತು ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯ ನಮಸ್ಕಾರ ಅಭಿಯಾನವನ್ನು ನಿನ್ನೆಯಿಂದ ಆರಂಭಿಸಿದರು.
ಅಭಿಯಾನದ ಪ್ರಯುಕ್ತ ಕಾಲೇಜಿನಲ್ಲಿ ಬೆಳಿಗ್ಗೆ ಮತ್ತು ಸಂಜೆ 375ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಿಕ್ಷಕರಾದ ಮಮತ, ಶಕುಂತಲ, ವೇದಶ್ರೀ, ತಿಲೋತ್ತಮೆ ಮತ್ತು ವಸಂತ್ ಅವರ ನೇತೃತ್ವದಲ್ಲಿ ಸಾಮೂಹಿಕವಾಗಿ ಸೂರ್ಯನಮಸ್ಕಾರ ಮಾಡಿದರು.
ಈ ವೇಳೆ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಜೆ.ಜಿ.ಸುರೇಂದ್ರ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ರಥಸಪ್ತಮಿ ಪ್ರಯುಕ್ತ ಭಾರತ ಮಾತೆಯ ಪಾದಕಮಲಗಳಿಗೆ ಹಾಗೂ ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯನಿಗೆ ನಮಸ್ಕಾರ ಸಲ್ಲಿಸುವ ನಿಟ್ಟಿನಲ್ಲಿ ಈ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು.
ಅಭಿಯಾನದ ಪ್ರಯುಕ್ತ ಕಾಲೇಜಿನಲ್ಲಿ 5 ದಿನಗಳ ಕಾಲ ವಿದ್ಯಾರ್ಥಿಗಳು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಿದ್ದು ನಂತರ ರಥಸಪ್ತಮಿ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ ಎಂದರು.
ಮನುಷ್ಯ ದೀರ್ಘಾಯುಷಿಯಾಗಬೇಕಾದರೆ ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡಬೇಕು, ನಿತ್ಯವೂ ಸೂರ್ಯ ನಮಸ್ಕಾರ ಹಾಕುವುದರಿಂದ ರೋಗಗಳಿಂದ ಮುಕ್ತರಾಗಿ ಬದುಕಬಹುದು ದೇಹದಲ್ಲಿ ಬಲ ಮತ್ತು ತೇಜಸ್ಸು ವೃದ್ಧಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.










