ಚಿಕ್ಕಮಗಳೂರು : ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಜಾನಪದ ಕಲಾವಿದರಿಗೆ ಆಹಾರ ಕಿಟ್ ವಿತರಣೆ…

146
firstsuddi

ಚಿಕ್ಕಮಗಳೂರು : ಸಾರ್ವಜನಿಕರು ಸ್ವಚ್ಚತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮನವಿ ಮಾಡಿದರು.
ನಗರದ ಲಯನ್ಸ್ ಸೇವಾ ಭವನದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮತ್ತು ಕರ್ನಾಟಕ ಜಾನಪದ ಪರಿಷತ್ ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಜಾನಪದ ಕಲಾವಿದರಿಗಾಗಿ ನೀಡಿದ ಆಹಾರದ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಕೊರೋನಾ ವೈರಸ್ ತಡೆಗಟ್ಟಲು ಕೇವಲ ಸರ್ಕಾರ ಅಥವಾ ಇಲಾಖೆಯಿಂದ ಸಾಧ್ಯವಾಗುವುದಿಲ್ಲ, ಜನತೆ ಜಾಗೃತರಾಗಿ ಸ್ವಚ್ಚತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ರೂಢಿಸಿಕೊಂಡು ಸರ್ಕಾರದೊಂದಿಗೆ ಸಹಕರಿಸಿದರೆ ಮಾತ್ರ ಮಹಾಮಾರಿಯನ್ನು ಯಶಸ್ವಿಯಾಗಿ ತಡೆಗಟ್ಟಬಹುದು ಎಂದು ಹೇಳಿದರು.
ಸರ್ಕಾರದ ಸತತ ಪ್ರಯತ್ನದ ನಡುವೆಯೂ ಕೊರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ, ಅದನ್ನು ನಿವಾರಿಸುವ ಔಷಧಿಯನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ, ಆ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಯಂ ಜಾಗೃತರಾಗಬೇಕು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ನಮ್ಮ ಪಕ್ಕದಲ್ಲೇ ವೈರಸ್ ಇದೆ ಎಂಬ ಭಾವನೆ ತಳೆದು ಅತ್ಯಂತ ಎಚ್ಚರಿಕೆಯಿಂದ ನಡೆದು ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ಲಾಕ್‍ಡೌನ್‍ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜಾನಪದ ಕಲಾವಿದರಿಗೆ ನೆರವು ನೀಡುವ ನಿಟ್ಟಿನಲ್ಲಿ ಪರಿಷತ್ತಿನ ರಾಜ್ಯಾಧ್ಯಕ್ಷ ತಿಮ್ಮೇಗೌಡರ ಸಹಕಾರದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಲಕ್ಷೀದೇವಮ್ಮ ಮಾತನಾಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಕರ್ನಾಟಕ ಜಾನಪದ ಪರಿಷತ್ ನೆರವಿನ ಹಸ್ತ ಚಾಚಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳ 50 ಜಾನಪದ ಕಲಾವಿದರಿಗೆ ಸಮಾರಂಭದಲ್ಲಿ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಿರಿಗಯ್ಯ, ಹಿರಿಯ ಜಾನಪದ ಕಲಾವಿದ ಮಾಳೇನಹಳ್ಳಿ ಬಸಪ್ಪ, ಉಪವಿಭಾಗಾಧಿಕಾರಿ ಡಾ|| ಹೆಚ್.ಎಲ್.ನಾಗರಾಜ್, ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಬಿ.ವಿರೂಪಾಕ್ಷ, ಉಪನ್ಯಾಸಕ ಜೆ.ಎಸ್.ದಯಾನಂದ್ ಉಪಸ್ಥಿತರಿದ್ದರು.