ಚಿಕ್ಕಮಗಳೂರು -ಇಂದಿನ ಪೀಳಿಗೆ ಪರಿಸರ ಸಂರಕ್ಷಣೆಯನ್ನು ತಮ್ಮ ಕರ್ತವ್ಯವೆಂದು ತಿಳಿಯಬೇಕು, ಸ್ವಯಂ ಪ್ರೇರಣೆಯಿಂದ ಗಿಡ ನೆಡುವ ಮೂಲಕ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಪಿ.ಸುರೇಶ್ ಸಲಹೆ ಮಾಡಿದರು.
ಲಯನ್ಸ್ ಕ್ಲಬ್ ತಾಲ್ಲೂಕಿನ ಮರ್ಲೆಯ ಶ್ರೀ ಕಲ್ಮರುಡೇಶ್ವರ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ದೇವರೆಂದು ಪೂಜಿಸುತ್ತಿದ್ದ ಪ್ರಕೃತಿಯ ಕೂಸಾಗಿ ನಾವು ಬದುಕಬೇಕು, ಅದನ್ನು ನಿಯಂತ್ರಿಸುವ ಸಾಹಸ ಮಾಡಬಾರದು. ಅತಿಯಾದ ಸ್ವಾರ್ಥದಿಂದಾಗಿ ನಾವು ಪರಿಸರವನ್ನು ನಿರಂತರವಾಗಿ ನಾಶಮಾಡುತ್ತಿದ್ದೇವೆ, ಶೇ.33 ರಷ್ಟು ಇರಬೇಕಾಗಿದ್ದ ಅರಣ್ಯವನ್ನು ಶೇ.13 ಕ್ಕೆ ಇಳಿಸಿದ್ದೇವೆ, ಇದರಿಂದಾಗಿ ಈಗಾಗಲೇ ಭೂಮಿಯ ಮೇಲೆ ಐದು ಪ್ರಳಯಗಳಾಗಿವೆ ಆರನೇ ಪ್ರಳಯ ಯಾವಾಗ ಬೇಕಾದರೂ ಆಗಬಹುದು ಅದನ್ನು ತಪ್ಪಿಸಬೇಕಾದರೆ ನಾವು ಸ್ವಾರ್ಥ ಬಿಟ್ಟು ಗಿಡಮರಗಳನ್ನು ಬೆಳೆಸಬೇಕು ಎಂದರು.
ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿರುವ ಅತಿವೃಷ್ಠಿ, ಅನಾವೃಷ್ಠಿ ಮತ್ತು ಪ್ರಕೃತಿ ವಿಕೋಪಕ್ಕೆ ಪರಿಸರ ನಾಶವೇ ಮೂಲಕಾರಣ ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿ ಶಿಲ್ಪ ಮಾತನಾಡಿ ಅತಿವೃಷ್ಠಿ,ಅನಾವೃಷ್ಠಿ ಮತ್ತು ಪ್ರಕೃತಿ ವಿಕೋಪಗಳಿಂದ ನಾವು ಪಾಠ ಕಲಿಯಬೇಕು, ಈಗಲಾದರೂ ಎಚ್ಚೆತ್ತು ಗಿಡಮರಗಳನ್ನು ಬೆಳೆಸಬೇಕು ಎಂದು ಸಲಹೆ ಮಾಡಿದರು.
ವನಮಹೋತ್ಸವದ ಅಂಗವಾಗಿ ಶಾಲೆಯ ಆವರಣದಲ್ಲಿ ವಿವಿಧ ಜಾತಿಯ 55 ಗಿಡಗಳನ್ನು ನೆಡಲಾಯಿತು, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಜಿಲ್ಲಾ ರಾಜ್ಯಪಾಲರ ಪ್ರತಿನಿಧಿ ಹೆಚ್.ಸಿ.ಶಶಿಪ್ರಸಾದ್, ಮಾಜಿ ಅಧ್ಯಕ್ಷರಾದ ಹೆಚ್.ಸಿ.ಮಹೇಶ್, ನೇತ್ರಾ ವೆಂಕಟೇಶ್, ಕಾರ್ಯದರ್ಶಿ ಮನೋಜ್ ಬಸವರಾಜ್, ಖಜಾಂಚಿ ಜಯರಾಮೇಗೌಡ, ಮುಖ್ಯಶಿಕ್ಷಕ ಎ.ಪುಟ್ಟಪ್ಪ ಉಪಸ್ಥಿತರಿದ್ದರು.
ಶಿಕ್ಷಕರಾದ ಕೆ.ಬಿ.ಚಂದ್ರಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು, ಎಂ.ಆರ್.ರುದ್ರಪ್ಪ ಸ್ವಾಗತಿಸಿದರು, ಎಸ್.ಎನ್.ಪುಟ್ಟರುದ್ರಪ್ಪ ವಂದಿಸಿದರು.
Home ನಮ್ಮ ಮಲ್ನಾಡ್ ಚಿಕ್ಕಮಗಳೂರು: ಸ್ವಯಂ ಪ್ರೇರಣೆಯಿಂದ ಗಿಡ ನೆಡುವ ಮೂಲಕ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು: ಲಯನ್ಸ್ ಕ್ಲಬ್...










