ಚಿಕ್ಕಮಗಳೂರು : ಹಿಂದಿನ ಜಿಲ್ಲಾಧಿಕಾರಿಗಳು ನಿವೇಶನ ನೀಡಿರುವ ಸ್ಥಳದಲ್ಲೇ ತಮಗೆ ಗುಡಿಸಲು ನಿರ್ಮಿಸಿಕೊಳ್ಳಲು ಅವಕಾಶ ಕೊಡುವಂತೆ ಮೂಡಿಗೆರೆ ತಾಲ್ಲೂಕು ಕೆ.ಕೆಳಗೂರಿನ ಪರಿಶಿಷ್ಠರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಡಾ|| ಕೆ.ಕುಮಾರ್ ಅವರನ್ನು ಇಂದು ಭೇಟಿ ಮಾಡಿದ ಪರಿಶಿಷ್ಠರು ಈ ಸಂಬಂಧ ಮನವಿ ಸಲ್ಲಿಸಿದರು.
ಕೂಲಿ ಕೆಲಸ ಮಾಡಿ ಬದುಕುತ್ತಿರುವ ನಿರಾಶ್ರಿತರಾದ ನಾವುಗಳು ಹಿಂದಿನ ಜಿಲ್ಲಾಧಿಕಾರಿ ಸತ್ಯವತಿ ಅವರಿಗೆ ನಿವೇಶನ ನೀಡುವಂತೆ ಮನವಿ ಸಲ್ಲಿಸಿದ್ದು, ಅದಕ್ಕೆ ಸ್ಪಂದಿಸಿದ ಅವರು ಕೆ.ಕೆಳಗೂರಿನ ಸರ್ವೆ ನಂ.52 ರ ಕಾರಕ್ಕಿ ಗುಡ್ಡದಲ್ಲಿ ಭೂಮಿಯನ್ನು ವಿತರಿಸಿದ್ದರು ಎಂದು ತಿಳಿಸಿದರು.
ಅಂದಿನಿಂದ 20 ಕುಟುಂಬಗಳು ಕಾರಕ್ಕಿ ಗುಡ್ಡದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದೇವೆ ಎಂದ ಅವರು ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಈ ಜಾಗ ಅರಣ್ಯ ಇಲಾಖೆಗೆ ಸೇರಿದೆ ಹಾಗಾಗಿ ನೀವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬೇರೆ ಜಾಗದಲ್ಲಿ ನಿವೇಶನಗಳನ್ನು ಪಡೆದುಕೊಳ್ಳಿ ಎಂದು ತಿಳಿಸಿ ನಮ್ಮ ಗುಡಿಸಲುಗಳನ್ನು ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿದರು.
ಇದರಿಂದಾಗಿ ಸೂರಿಲ್ಲದೇ ತಮ್ಮ ಬದುಕು ಅತಂತ್ರಗೊಂಡಿದೆ, ನಮಗೆ ನೀಡಿದ್ದ ಸರ್ವೆ ನಂ.52ರ ಕಾರಕ್ಕಿ ಗುಡ್ಡದ ಪಹಣಿಯಲ್ಲಿ ಆ ಜಾಗ ಅರಣ್ಯ ಇಲಾಖೆಗೆ ಸೇರಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಹಾಗಾಗಿ ಅದೇ ಜಾಗದಲ್ಲಿ ಮತ್ತೆ ಗುಡಿಸಲು ನಿರ್ಮಿಸಿಕೊಳ್ಳಲು ನಮಗೆ ಅವಕಾಶ ನೀಡಬೇಕು ಮತ್ತು ಆ ಜಾಗವನ್ನು ನಮಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಬಿಎಸ್‍ಪಿ ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಮುಖಂಡರಾದ ತಾಹೀರ್ ಜಾನ್, ಹರೀಶ್, ಲಕ್ಷ್ಮಣ್, ವಸಂತ, ಗ್ರಾಮಸ್ಥರಾದ ಬಿ.ಕೆ.ಚಲ್ಲು, ಇಂದ್ರೇಶ್, ಸುಂದರ, ಸಂಜೀವ, ಚೆನ್ನಪ್ಪ, ಎಂ.ಬಾಲು, ಉಮೇಶ, ಅಶೋಕ್, ಸಂದೀಪ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಹಿಂದಿನ ಜಿಲ್ಲಾಧಿಕಾರಿಗಳು ನೀಡಿರುವ ಸ್ಥಳದಲ್ಲೇ ಗುಡಿಸಲು ನಿರ್ಮಿಸಿಕೊಳ್ಳಲು ಅವಕಾಶ ಕೊಡುವಂತೆ ಕೆ.ಕೆಳಗೂರಿನ ಪರಿಶಿಷ್ಠರಿಂದ...










