ಬಳ್ಳಾರಿಯಲ್ಲಿ ಯಾರೇ ಸ್ಪರ್ಧಿಸಿದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯಲ್ಲ : ಸೋಮಶೇಖರ್ ರೆಡ್ಡಿ.

54
firstsuddi

ಬಳ್ಳಾರಿ : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಬಳ್ಳಾರಿ ನಗರ ಕ್ಷೇತ್ರದಿಂದ ತಮ್ಮ ಪತ್ನಿ ಲಕ್ಷ್ಮೀ ಅರುಣಾ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ. ಸದ್ಯ ಈ ಬಗ್ಗೆ ಜನಾರ್ದನ ರೆಡ್ಡಿ ಅವರ ಅಣ್ಣ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡಿದರೂ ಕೂಡ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಬಳ್ಳಾರಿ ನಗರ ಕ್ಷೇತ್ರದಿಂದ ತಮ್ಮ ಸ್ಪರ್ಧೆ ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಿದ ಅವರು, ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುವೆ. ಪಕ್ಷೇತರನಾಗಿ ಗೆದ್ದ ನಂತರ ಮತ್ತೆ ಬಿಜೆಪಿ ಸೇರುತ್ತೇನೆ ಎಂದರು.

ನನ್ನ ವಿರುದ್ಧ ಅಭ್ಯರ್ಥಿ ಹಾಕಿದ್ದಕ್ಕೆ ನಗರದ ಪ್ರತಿಷ್ಠಿತ ಮನೆತನದ ವ್ಯಕ್ತಿಗಳು ಬೇಜಾರಾಗಿದ್ದಾರೆ. ಅಧಿಕಾರ ಇದ್ದಾಗ ದುಡಿದುಕೊಂಡವರು ಇಂತಹ ಕೆಲಸ ಮಾಡಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇಷ್ಟು ದಿನ ಎಲ್ಲಿದ್ದರು? ಇದೀಗ ಹೊರ ಬಂದಿದ್ದಾರೆ. ಬಳ್ಳಾರಿ ನಗರದ ಜನತೆ ನನ್ನ ಕೈಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಹಳೆಯ ಸಂದರ್ಭಗಳನ್ನು ನೆನೆದು ಭಾವುಕರಾದ ಸೋಮಶೇಖರ್ ರೆಡ್ಡಿ, ಲಕ್ಷ್ಮೀ ಅರುಣಾ ಸ್ಪರ್ಧೆ ಮಾಡೋದು ಒಳ್ಳೆಯದು, ನಾದಿನಿ ಭಾವ ಮಧ್ಯೆ ಸ್ಪರ್ಧೆ ಕುತೂಹಲಕಾರಿಯಾಗಿ ಇರುತ್ತದೆ. ತಮ್ಮ ಜನಾರ್ದನ ರೆಡ್ಡಿ ಜೈಲಲಿದ್ದಾಗ ಅವನಿಗಾಗಿ 2018ರಲ್ಲಿ ನಾನು ಚುನಾವಣೆಗೆ ನಿಲ್ಲಲಿಲ್ಲ. ಆತನಿಗಾಗಿ 63 ದಿನಗಳ ಕಾಲ ಜೈಲಿಗೆ ಹೋಗಿ ಬಂದೆ. ಆ ಸಂದರ್ಭ ಲಕ್ಷ್ಮೀ ಅರುಣಾ ಭಾವ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ತಮ್ಮನ ಮಗಳು ಬ್ರಹ್ಮಣಿ ಕೂಡ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಚಿಕ್ಕಪ್ಪ ಎಂದಿದ್ದರು ಎಂದು ಇದೇ ಸಂದರ್ಭದಲ್ಲಿ ಹೇಳಿದರು.