ಜಾನಪದರ ಆದರ್ಶಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಂಡರೆ ಮಾತ್ರ ಪರಿಸರ ಉಳಿಯುತ್ತದೆ : ವಾಗೀಶ್

79
firstsuddi

ಚಿಕ್ಕಮಗಳೂರು : ಜಾನಪದರ ಆದರ್ಶಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಂಡಲ್ಲಿ ಮಾತ್ರ ಪರಿಸರ ಉಳಿಯುತ್ತದೆ ಎಂದು ತರೀಕೆರೆ ವಲಯ ಅರಣ್ಯಾಧಿಕಾರಿ ವಾಗೀಶ್ ಹೇಳಿದರು.

ತರೀಕೆರೆ ತಾಲ್ಲೂಕು ಪ್ರಥಮ ಜಾನಪದ ಸಮ್ಮೇಳನದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ ತ್ಯಾಗದಬಾಗಿಯಲ್ಲಿ ಭಾನುವಾರ ಆಯೋಜಿಸಿದ್ದ ಪರಿಸರ ಸಂರಕ್ಷಣೆಯಲ್ಲಿ ಜಾನಪದರ ಪಾತ್ರ ವಿಷಯ ಕುರಿತ ವಿಚಾರ ಸಂಕೀರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದರು ಪ್ರಕೃತಿಯನ್ನು ದೇವರೆಂದು ಪೂಜಿಸುತ್ತಿದ್ದರು, ಗಿಡಮರಗಳನ್ನು ನೆಟ್ಟು ಬೆಟ್ಟಗುಡ್ಡ ನೀರಿನ ಮೂಲಗಳನ್ನು ಸಂರಕ್ಷಿಸುತ್ತಿದ್ದರು ಹಾಗಾಗಿ ಜನಪದರ ಕಾಲದಲ್ಲಿ ಹಸಿರು ಎಲ್ಲೆಡೆ ತಾಂಡವವಾಡುತ್ತಿತ್ತು ಎಂದರು.

ಇದೀಗ ಜಾಗತೀಕರಣದ ಪರಿಣಾಮವಾಗಿ ದಟ್ಟಕಾಡುಗಳು ಮಾಯವಾಗಿವೆ, ಅದರಿಂದಾಗಿ ಕಾಡುಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ ಎಂದ ಅವರು ಇಂದಿನ ಪೀಳಿಗೆ ಈಗಲಾದರೂ ಎಚ್ಚೆತ್ತು ಜಾನಪದರು ಮತ್ತು ಸಾಲುಮರದ ತಿಮ್ಮಕ್ಕನ ಹಾದಿಯಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ಪರಿಸರ ಉಳಿದರೆ ಮಾತ್ರ ನಮ್ಮ ಉಳಿವು ಎಂಬುದನ್ನು ಇಂದಿನ ಪೀಳಿಗೆ ಅರ್ಥ ಮಾಡಿಕೊಳ್ಳಬೇಕು, ಹಸಿರಿನ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.

ಆಧುನಿಕತೆಯಿಂದಾಗಿ ಕಣ್ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಷತ್ತಿನಿಂದ ಜಿಲ್ಲಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲೂ ಜಾನಪದ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಜಾಪ ತಾಲ್ಲೂಕು ಅಧ್ಯಕ್ಷ ನಾಗೇಶ್ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. ಇದೇ ವೇಳೆ ತರೀಕೆರೆ ತಾಲ್ಲೂಕು ಪ್ರಥಮ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಎಸ್.ಬಿ.ರಮೇಶ್, ಹೆಚ್.ಬಿ.ಮಲ್ಲಿಕಾರ್ಜುನ, ನಾಗೇನ ಹಳ್ಳಿ ತಿಮ್ಮಯ್ಯ, ಗ್ರಾಮದ ಮುಖಂಡರಾದ ಪಿ.ದೇವರಾಜು, ನಾಗೇಂದ್ರಪ್ಪ, ಸಮ್ಮೇಳನಾಧ್ಯಕ್ಷ ಜಿ.ಎಸ್.ಆನಂದಮೂರ್ತಿ, ಜಿ.ಟಿ.ಕುಮಾರಸ್ವಾಮಿ, ಟಿ.ಎನ್.ಗಿರೀಶ್, ಜಿ.ಎಸ್.ಲೋಕೇಶ್, ಉಪಸ್ಥಿತರಿದ್ದರು.