ಜನ್ಮ ನೀಡಿದ ಬಳಿಕ ಹೆಣ್ಣು ಶಿಶುವಿನ ಕತ್ತು ಹಿಸುಕಿ ಕೊಂದ 15ರ ಬಾಲಕಿ…

45
firstsuddi

ಮುಂಬೈ: 15 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಬಳಿಕ ಶಿಶುವಿನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಅಂಬಾಜಾರಿ ಪ್ರದೇಶದ ನಿವಾಸಿಯಾದ ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ಪರಿಚಯ ಸಲುಗೆಗೆ ತಿರುಗಿ ಆತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇದರಿಂದಾಗಿ ಅವಳು ಗರ್ಭಿಣಿಯಾದಳು. ಆದರೆ ತಾಯಿ ಬಳಿ ಮಾತ್ರ ತನಗೆ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳುತ್ತಾ ತಾನು ಗರ್ಭಿಣಿ ಎಂಬ ವಿಚಾರವನ್ನು ಮುಚ್ಚಿಟ್ಟಿದ್ದಳು.

ಮಾ.3ರಂದು ಬಾಲಕಿಗೆ ನೋವು ಕಾಣಿಸಿಕೊಂಡಿತ್ತು. ಯೂಟ್ಯೂಬ್ ವಿಡಿಯೋಗಳ ಸಹಾಯದಿಂದ ಮನೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ನವಜಾತ ಶಿಶುವನ್ನು ಕತ್ತು ಹಿಸುಕಿ ಸಾಯಿಸಿದ್ದಾಳೆ. ಈ ವಿಚಾರ ಕುಟುಂಬಸ್ಥರಿಗೆ ತಿಳಿಯದ ಕಾರಣ ನವಜಾತ ಶಿಶುವಿನ ಮೃತದೇಹವನ್ನು ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಹಾಕಿ ಮನೆಯಲ್ಲೇ ಬಚ್ಚಿಟ್ಟಿದ್ದಳು.

ಮನೆಗೆ ಮರಳಿದ ತಾಯಿ ಮಗಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಬಾಲಕಿ ಭಯದಿಂದ ತನ್ನ ತಾಯಿಗೆ ಇಡೀ ಘಟನೆಯನ್ನು ಹೇಳಿದ್ದಾಳೆ, ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ನವಜಾತ ಶಿಶುವಿನ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.