ಜನ 2-3 ವಾರ ನಮ್ಮ ಜೊತೆ ಸಹಕಾರ ಕೊಡಬೇಕು : ಸಚಿವ ಸುಧಾಕರ್.

82
firstsuddi

ಬೆಂಗಳೂರು : ರಾಜ್ಯದಲ್ಲಿ 2-3 ವಾರಗಳಲ್ಲಿ ಕೊರೊನಾ ಮೂರನೇ ಅಲೆ ಕಡಿಮೆ ಆಗುತ್ತದೆ. ಜನರು ಮಾರ್ಗಸೂಚಿ ಪಾಲನೆ ಮಾಡಬೇಕು. ಲಸಿಕೆ ಹಾಕಿಸಿಕೊಳ್ಳಬೇಕು. ಎರಡು ಡೋಸ್, ಮೂರು ಡೋಸ್ ಪಡೆದಿರುವುದರಿಂದ ಹೆಚ್ಚು ತೊಂದರೆ ಆಗುವುದಿಲ್ಲ. ಜನ 2-3 ವಾರ ನಮ್ಮ ಜೊತೆ ಸಹಕಾರ ಕೊಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಹೇಳಿದ್ದಾರೆ.

ಇಂದು ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ 5,230 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 3,442 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ, 1788 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟಾರೆಯಾಗಿ 3,62,487 ಸಕ್ರಿಯ ಕೇಸುಗಳಿವೆ. ಇಷ್ಟು ಸಕ್ರಿಯ ಕೇಸುಗಳಲ್ಲಿ ಆಸ್ಪತ್ರೆಯಲ್ಲಿರುವವರ ಸಂಖ್ಯೆ ಶೇಕಡಾ 2ಕ್ಕಿಂತ ಕಡಿಮೆಯಾಗಿದೆ. ಜನರು ಆತಂಕಗೊಳ್ಳುವ ಅವಶ್ಯಕತೆಯಿಲ್ಲ. ಜನರು ಮುನ್ನೆಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿಕೊಂಡರು.

ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಮತ್ತು ಸಿಎಂ ಈ ತೀರ್ಮಾನ ಮಾಡಿದ್ದಾರೆ. ಹೈಕಮಾಂಡ್, ಸಿಎಂ ನಿರ್ಧಾರಕ್ಕೆ ನಾನು ಬದ್ಧ. ಇದು ಪಕ್ಷದ ಆಂತರಿಕ ವಿಚಾರ. ಹೀಗಾಗಿ ನಮ್ಮ ಸಲಹೆ, ಅಭಿಪ್ರಾಯ ಪಕ್ಷದ ವೇದಿಕೆಯಲ್ಲಿ ಹೇಳುತ್ತೇವೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.