ಚಿಕ್ಕಮಗಳೂರು: ನವ ನಾಗರೀಕತೆಯಿಂದಾಗಿ ಕಾಲಗರ್ಭ ಸೇರುತ್ತಿರುವ ಜಾನಪದವನ್ನು ಜತನದಿಂದ ಕಾಪಾಡುವ ಮಹತ್ತರ ಹೊಣೆಗಾರಿಕೆ ಮಹಿಳೆಯರ ಮೇಲಿದೆ ಎಂದು ಸಾಹಿತಿ, ರಂಗಕರ್ಮಿ, ಡಿ.ಎಂ.ಮಂಜುನಾಥ ಸ್ವಾಮಿ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಗರದ ಗಮಕಿ ಶಶಿಕಲಾ ಶಿವಶಂಕರ್ ಅವರ ನಿವಾಸದಲ್ಲಿ ನಿನ್ನೆ ಆಯೋಜಿಸಿದ್ದ ಮನೆಯಂಗಳದಲ್ಲಿ ಜಾನಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆಯ ಪರಿಣಾಮ ನವ ನಾಗರಿಕತೆಯು ಪಟ್ಟಣ ನಗರ ಮಾತ್ರವಲ್ಲದೆ ಕುಗ್ರಾಮಗಳ ಗುಡಿಸಲಿನ ಅಡಿಗೆ ಮನೆಯೊಳಗೂ ನುಗ್ಗಿದ ಕಾರಣ ಇಂದು ಭಾರತೀಯ ನೆಲದೊಳಗಿದ್ದ ದೇಸೀತನ ಅದರೊಳಗಿದ್ದ ನೆಲ ಮೂಲದ ಬದುಕಿನ ತಾಯಿಬೇರುಗಳು ಸಡಿಲವಾಗುತ್ತಿವೆ ಎಂದು ವಿಷಾದಿಸಿದರು.
ಜಾನಪದ ಎಲ್ಲಾ ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೆ ತಾಯಿಬೇರಿದ್ದಂತೆ ಜಾನಪದ ಸಾಹಿತ್ಯದ ಸತ್ವ ಮತ್ತು ಸಾರವನ್ನು ಹೀರಿಕೊಂಡು ಶಿಷ್ಟ ಸಾಹಿತ್ಯ ಇಂದು ಬೆಳೆದು ನಿಂತಿದೆ ಎಂದರು.
ಅನಾದಿ ಕಾಲದಿಂದ ಮಹಿಳೆಯರು ತಮ್ಮದೇ ಆದ ಆಡು ಭಾಷೆಯ ಸೊಲ್ಲು ಸೊಗಡುಗಳ ಮೂಲಕ ಜಾನಪದವನ್ನು ಕಟ್ಟಿ ಬೆಳೆಸಿದ್ದಾರೆ. ಇಂದಿನ ಮಹಿಳೆಯರು ಆಧುನಿಕತೆಯ ಗೀಳನ್ನು ಬಿಟ್ಟು ಜಾನಪದವನ್ನು ಅಪ್ಪಿಕೊಂಡರೆ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಹಿಳೆಯರು ಅನಾದಿಕಾಲದಿಂದ ತಾವೇ ಕಟ್ಟಿ ಬೆಳೆಸಿರುವ ಜಾನಪದವನ್ನು ಮರೆಯಬಾರದು. ಅದನ್ನು ಮನೆ ಮನೆಗಳಲ್ಲಿ ಬಳಸುವ ಮೂಲಕ ಬೆಳೆಸಬೇಕು ಎಂದು ಮನವಿ ಮಾಡಿದರು.
ಇಂದಿನ ಪೀಳಿಗೆ ಆಧುನಿಕತೆಯ ಗೀಳಿಗೆ ಬಿದ್ದ ಪರಿಣಾಮ ಸತ್ವವಿಲ್ಲದ, ಅರ್ಥವಿಲ್ಲದ, ಅಶ್ಲೀಲ ಸಾಹಿತ್ಯ, ಸಂಗೀತ ಇಂದು ಎಲ್ಲೆಡೆ ರಾರಾಜಿಸುತ್ತಿವೆ. ಸಂಬಂಧಗಳು, ಮಾನವೀಯತೆ ಮರೆಯಾಗಿವೆ ಎಂದು ವಿಷಾದಿಸಿದರು.
ಜಾನಪದವನ್ನು ಉಳಿಸಿ ಬೆಳೆಸುವುದು ಮಹಿಳೆಯರಿಂದ ಮಾತ್ರ ಸಾಧ್ಯ. ಹಾಗಾಗಿ ಅವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮನೆಯಂಗಳದಲ್ಲಿ ಜಾನಪದ ಕಾರ್ಯಕ್ರಮವನ್ನು ಪರಿಷತ್ತು ಆರಂಭಿಸಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗಮಕಿ ಶಶಿಕಲಾ ಶಿವಶಂಕರ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ದಾಸ ವಿಠ್ಠಲ ಭಜನಾ ಮಂಡಳಿಯ ಮಹಿಳೆಯರಿಂದ ಜಾನಪದ ಗೀತೆಗಳ ಗಾಯನ ಸಾಮೂಹಿಕ ಭಜನೆ ಜರುಗಿತು. ಬಿಎಸ್‍ಎನ್‍ಎಲ್ ನಿವೃತ್ತಅಧಿಕಾರಿ ಸುಮನಾ ಭಟ್, ಲಕ್ಷ್ಮೀ ಉಪಸ್ಥಿತರಿದ್ದರು.










