ಬೆಂಗಳೂರು: ನನ್ನ ಲಾಭ ನಷ್ಟ ನೋಡಿ ಪಕ್ಷ ಸೇರುವ ಬಗ್ಗೆ ನಿರ್ಧಾರ ಮಾಡಲ್ಲ. ನನ್ನ ಜೊತೆ ಇರುವವರ ಬಗ್ಗೆಯೂ ನೋಡಿಕೊಂಡೇ ನಿರ್ಧಾರ ಮಾಡಬೇಕಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಇಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರನ್ನು ಭೇಟಿ ಮಾಡಿದ ಬಳಿಕ ಬಿಜೆಪಿ ಸೇರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಸಂಸದೆ ಪ್ರತಿಕ್ರಿಯಿಸಿದರು. ಇವತ್ತು ಮಂಡ್ಯದಿಂದ ಹಲವರು ಬಂದಿದ್ದಾರೆ. ಎಲ್ಲರ ಜೊತೆ ಚರ್ಚೆ ಮಾಡುತ್ತೇನೆ. ನಾನು ಯಾವುದೇ ತೀರ್ಮಾನ ಇನ್ನೂ ಮಾಡಿಲ್ಲ. ಇನ್ನೂ ಹಲವರ ಜೊತೆ, ವರಿಷ್ಠರ ಜೊತೆ ಚರ್ಚೆ ಮಾಡಬೇಕು ಎಂದರು.
ಎಸ್.ಎಂ ಕೃಷ್ಣ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಎಸ್.ಎಂ.ಕೃಷ್ಣ ಅವರು ನಮ್ಮ ಜಿಲ್ಲೆಯ ಹಿರಿಯ ನಾಯಕರು. ಅವರಿಗೆ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಬಂದಿದೆ. ನಾನು ಅವರನ್ನು ಭೇಟಿ ಮಾಡಿರಲಿಲ್ಲ. ಇವತ್ತು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಇಲ್ಲಿ ಯಾವುದೇ ರಾಜಕೀಯ ವಿಚಾರ ಮಾತಾಡಿಲ್ಲ ಎಂದು ಹೇಳಿದರು.










