ರಾಂಚಿ : ಜಾರ್ಖಂಡ್ನ ಛತ್ರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಐವರು ನಕ್ಸಲರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ ಐವರು ನಕ್ಸಲರ ಪೈಕಿ ಗೌತಮ್ ಪಾಸ್ವಾನ್ ಮತ್ತು ಚಾರ್ಲಿ ಇಬ್ಬರೂ ವಿಶೇಷ ಪ್ರದೇಶ ಸಮಿತಿಯ ಸದಸ್ಯರಾಗಿದ್ದು, ಇವರ ಬಂಧನಕ್ಕೆ ಈ ಹಿಂದೆ ಪೊಲೀಸರು ತಲಾ 25 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದರು. ನಂದು, ಅಮರ್ ಗಂಜು ಮತ್ತು ಸಂಜೀವ್ ಭುಯಾನ್ ಉಪ ವಲಯ ಕಮಾಂಡರ್ಗಳಾಗಿದ್ದು , ಇವರಿಗೆ ತಲಾ 5 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು.
ನಕ್ಸಲರು ಇರುವ ಬಗ್ಗೆ ನಿಖರ ಸುಳಿವು ಸಿಕ್ಕ ನಂತರ ಎನ್ಕೌಂಟರ್ ಕಾರ್ಯಾಚರಣೆ ನಡೆಸಲಾಯಿತು. ಹತ್ಯೆಯಾದವರ ಬಳಿಯಿದ್ದ ಎರಡು ಎಕೆ 47 ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ನಕ್ಸಲರು ವಾಹನಗಳು, ಟವರ್ ಗಳಿಗೆ ಬೆಂಕಿ ಹಚ್ಚುವುದು. ಪೊಲೀಸ್ ಮಾಹಿತಿದಾರರು ಮತ್ತು ಇತರರನ್ನು ಗುರುತಿಸಿ ಹಲ್ಲೆ ನಡೆಸುವುದು ಸೇರಿದಂತೆ ಹಲವಾರು ಕುಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಎಎಸ್ ಪಿ ಸಿನ್ಹಾ ತಿಳಿಸಿದ್ದಾರೆ.
ಸಿಆರ್ಪಿಎಫ್ ಕೋಬ್ರಾ ಬೆಟಾಲಿಯನ್, ಜೆಎಪಿ ಮತ್ತು ಐಆರ್ಬಿ ಜೊತೆಗೆ ಪಲಾಮು ಮತ್ತು ಚತ್ರಾ ಜಿಲ್ಲೆಗಳ ಪೊಲೀಸ್ ಪಡೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು ಎಂದು ತಿಳಿದು ಬಂದಿದೆ.










