ಜೂನ್ 21ರಿಂದ ಅನ್ ಲಾಕ್ 2.0 ಬಗ್ಗೆ ಇಂದು ಮಹತ್ವದ ನಿರ್ಧಾರ…

77
firstsuddi

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತಿರುವ ಹಿನ್ನಲೆ ಸೋಮವಾರದಿಂದ ಎರಡನೇ ಹಂತದ ಅನ್ ಲಾಕ್ ಮಾಡಲು ಸರ್ಕಾರ ಮುಂದಾಗಿದ್ದು, ಯಾವುದಕ್ಕೆಲ್ಲಾ ಅನುಮತಿ ನೀಡಲಾಗುತ್ತದೆ ಎಂಬುದು ಇಂದಿನ ಸಭೆಯಲ್ಲಿ ನಿರ್ಧಾರವಾಗುತ್ತದೆ. ಹಾಗಾಗಿ ಬಿಎಂಟಿಸಿ, ಕೆಎಸ್ ಆರ್ ಟಿಸಿ ಮತ್ತು ಮೆಟ್ರೋ ಸಂಚಾರ ಪುನಾರಂಭವಾಗುವುದು ಬಹುತೇಕ ಖಚಿತವಾಗಿದ್ದು, ಹಲವು ಷರತ್ತುಗಳು ಅನ್ವಯವಾಗುವ ಸಾಧ್ಯತೆ ಇದೆ.

ಜೂನ್ 21ರಿಂದ ಅನ್ ಲಾಕ್ ಜಾರಿಯಾದರೆ ಶೇ. 50ರಷ್ಟು ಬಿಎಂಟಿಸಿ, ಕೆಎಸ್ ಆರ್ ಟಿಸಿ ಮತ್ತು ಮೆಟ್ರೋ ಸಂಚಾರಕ್ಕೆ ಅವಕಾಶ ಸಿಗಬಹುದು ಎಂದು ಅಂದಾಜಿಸಲಾಗಿದೆ. ಬಿಎಂಟಿಸಿ ಬಸ್ ಸೋಮವಾರದಿಂದ ನಗರದಾದ್ಯಂತ ಸಂಚರಿಸುವುದು ಖಚಿತವಾಗಿದ್ದು, ಕರ್ತವ್ಯಕ್ಕೆ ಹಾಜರಾಗುವ ಮುನ್ನ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರೋದ್ರಿಂದ ಇಂದು ಹಾಗೂ ನಾಳೆ ಬಸ್ ಸಿಬ್ಬಂದಿಗೆ ಕೊರೊನಾ ಟೆಸ್ಟ್ ನಡೆಸಲಾಗುತ್ತದೆ. ಹೀಗಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಘಟಕದ ವ್ಯವಸ್ಥಾಪಕರು ಈಗಾಗಲೇ ಸೂಚನೆ ನೀಡಿದ್ದಾರೆ.

ಇಂದಿನ ಸಭೆಯಲ್ಲಿ ಮೆಟ್ರೋ ಸಂಚಾರದ ಬಗ್ಗೆ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಮೆಟ್ರೋ ಸಂಚಾರಕ್ಕೂ ಷರತ್ತು ಅನ್ವಯವಾಗುವ ಸಾಧ್ಯತೆಯಿದ್ದು, ಬೆಳಗ್ಗೆ 7 ಗಂಟೆಯಿಂದ 11 ಗಂಟೆ ಮತ್ತು ಸಂಜೆ 4 ಗಂಟೆಯಿಂದ 6 ಗಂಟೆಯವರಿಗೆ ಮೆಟ್ರೋ ಓಡಾಟಕ್ಕೆ ಅವಕಾಶ ಇರಲಿದೆ ಎಂದು ತಿಳಿದು ಬಂದಿದೆ. ಒಂದು ರೈಲಿನಲ್ಲಿ 400 ಜನರ ಸಂಚಾರಕ್ಕೆ ಅವಕಾಶ ನೀಡಬಹುದು.

ಇನ್ನೂ ಕೆಎಸ್ ಆರ್ ಟಿಸಿಯಲ್ಲಿ ಒಟ್ಟು 8 ಸಾವಿರ ಬಸ್ ಗಳಿದ್ದು, ಈ ಪೈಕಿ 2,500ರಿಂದ 3,000 ಬಸ್ ಗಳನ್ನು ರಸ್ತೆಗಿಳಿಸಲು ಸರ್ಕಾರ ಚಿಂತನೆ ನಡೆಸಿದೆ. ಅತಿ ಹೆಚ್ಚು ಸೋಂಕು ಇರುವ ಹೊರ ರಾಜ್ಯಗಳಿಗೆ ಬಸ್ ಸಂಚಾರ ಇರುವುದಿಲ್ಲ. ಎಸಿ, ವೋಲ್ವೋ ಬಸ್ಗಳ ಓಡಾಟ ಸದ್ಯಕ್ಕೆ ಇಲ್ಲ ಎನ್ನಲಾಗಿದೆ. ಕೆಎಸ್ ಆರ್ ಟಿಸಿಯಲ್ಲೂ ಶೇ. 50ರಷ್ಟು ಪ್ರಯಾಣಿಕರಿಗೆ ಅವಕಾಶ ಇರಲಿದೆ. ಕೆಎಸ್ ಆರ್ ಟಿಸಿಯ ಚಾಲಕ- ನಿರ್ವಾಹಕರು ಕೂಡ ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು. ಲಸಿಕೆ ಪಡೆದ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.