ಟಿಕೆಟ್ ಸಿಗದ್ದಕ್ಕೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂಡಿಎಂಕೆ ಸಂಸದ ಚಿಕಿತ್ಸೆ ಫಲಿಸದೆ ಸಾವು…

41
firstsuddi

ಕೊಯಮತ್ತೂರು(ತಮಿಳುನಾಡು): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂಡಿಎಂಕೆ (ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ) ಈರೋಡ್ ಕ್ಷೇತ್ರದ ಸಂಸದ ಗಣೇಶಮೂರ್ತಿ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 5 ಗಂಟೆಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಘಟನೆಯ ಹಿನ್ನಲೆ:-
ಮಾ.24ರ ಬೆಳಿಗ್ಗೆ 9.30ರ ಸುಮಾರಿಗೆ ಗಣೇಶಮೂರ್ತಿ ಅವರು ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥರಾದರು. ಆಗ ನೀರು ಬೆರೆಸಿದ ಕೀಟನಾಶಕ ಸೇವನೆ ಮಾಡಿರುವ ಬಗ್ಗೆ ನಮಗೆ ತಿಳಿಸಿದ್ದರು ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದ್ದರು.

ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಚಿಕಿತ್ಸೆಗಾಗಿ ಈರೋಡ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರನ್ನು ತಪಾಸಣೆ ಮಾಡಿ ಐಸಿಯುಗೆ ದಾಖಲಿಸಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ವಿಶೇಷ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

2019ರ ಚುನಾವಣೆಯಲ್ಲಿ ಗಣೇಶಮೂರ್ತಿ ಈರೋಡ್ ಕ್ಷೇತ್ರದ ಸಂಸದರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಮತ್ತು ಎಂಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಪಾಲನೆಯ ಹಿನ್ನೆಲೆಯಲ್ಲಿ ಈರೋಡ್ ಕ್ಷೇತ್ರ ಡಿಎಂಕೆ ಪಾಲಾಗಿತ್ತು. ಹೀಗಾಗಿ ತಮಗೆ ಟಿಕೆಟ್ ತಪ್ಪಿದ್ದಕ್ಕೆ ನೊಂದಿದ್ದ ಗಣೇಶಮೂರ್ತಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.