ಬಾಗಲಕೋಟೆ: : ವಿದ್ಯಾರ್ಥಿಯೋರ್ವ ಕಾಲೇಜಿಗೆ ಮುಸ್ಲಿಂ ಟೋಪಿ ಹಾಕಿಕೊಂಡು ಬಂದಿದ್ದಕ್ಕೆ ಆತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲ ಮತ್ತು ಆರು ಜನ ಪೊಲೀಸರ ವಿರುದ್ಧ ಎಫ್ಐಆರ್ ಎಫ್ಐಆರ್ ದಾಖಲಾಗಿದೆ
19 ವರ್ಷದ ನವೀದ್ ಹಸನ್ ಸಾಬ್ ಥರಾತರಿ ಹಲ್ಲೆಗೊಳಗಾದ ವಿದ್ಯಾರ್ಥಿ. ಜಿಲ್ಲೆಯ ತೇರದಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿದ್ದಾನೆ. ಫೆಬ್ರವರಿ 18 ರಂದು ನವೀದ್ ಥರಾತರಿ ಮುಸ್ಲಿಂ ಟೋಪಿ ಹಾಕಿಕೊಂಡು ಕಾಲೇಜಿಗೆ ಬಂದಿದ್ದನು. ಈ ಹಿನ್ನಲೆ ನವೀದ್ ಮೇಲೆ ಪ್ರಿನ್ಸಿಪಾಲ್ ಸೇರಿ 7 ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು. ಹಲ್ಲೆ ನಂತರ ನವೀದ್ ಜಮಖಂಡಿ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲದೇ ನವೀದ್ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ಮೊರೆ ಹೋಗಿದ್ದ.
ಪರಿಣಾಮ ಬನಹಟ್ಟಿಯ ಜೆಎಂಎಫ್ ಸಿ ನ್ಯಾಯಾಲಯದ ಆದೇಶದನ್ವಯ ಪಿಎಸ್ ಐ ರಾಜು ಬೀಳಗಿ, ಪೊಲೀಸ್ ಕಾನ್ ಸ್ಟೇಬಲ್ ಗಳಾದ ಗಣಿ ಪಿ.ಹೆಚ್.ಮಲ್ಲಿಕಾರ್ಜುನ್, ಕೆಂಚಣ್ಣವರ, ಎಸ್.ಬಿ.ಕಲಾಟೆ, ಎಸ್.ಸಿ.ಮದನಮಟ್ಟಿ, ಸನ್ನತ್ತಿ, ಪ್ರಿನ್ಸಿಪಾಲ್ ಅಣ್ಣಪ್ಪಯ್ಯ ಪೂಜಾರಿ ವಿರುದ್ಧ ತೇರದಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 109, 295 (ಎ), 323, 324, 341, 342 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.










