ಟ್ರಾಫಿಕ್, ಟೋಯಿಂಗ್ ನೂತನ ವ್ಯವಸ್ಥೆ ಶೀಘ್ರವೇ ಜಾರಿ : ಗೃಹ ಸಚಿವ.

83
firstsuddi

ಬೆಂಗಳೂರು : ಟೋಯಿಂಗ್ ಮಾಡೋದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಈಗಾಗಲೇ ಸಿಎಂ ಜೊತೆ ಈ ಬಗ್ಗೆ ಚರ್ಚೆ ಆಗಿದೆ. ಹೊಸ ಟೋಯಿಂಗ್ ವ್ಯವಸ್ಥೆ ಶೀಘ್ರವಾಗಿ ಜಾರಿ ಮಾಡುತ್ತೇವೆ. ಅಲ್ಲದೆ ಟ್ರಾಫಿಕ್ ಇಲಾಖೆ ವ್ಯವಸ್ಥೆಯಲ್ಲೂ ವಿಶೇಷ ಕಾರ್ಯಕ್ರಮ ಜಾರಿ ಮಾಡುತ್ತಿದ್ದೇವೆ. ಜನ ಸ್ನೇಹಿ ಟ್ರಾಫಿಕ್ ವ್ಯವಸ್ಥೆ ತರುತ್ತಿದ್ದೇವೆ. ಶೀಘ್ರವೇ ಎರಡೂ ನೂತನ ವ್ಯವಸ್ಥೆ ಜಾರಿಗೆ ಬರುತ್ತೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸಿದ ಅವರು, ಕಳೆದ ಆರು ವರ್ಷದಲ್ಲಿ 3,365 ಪಿಎಸ್ ಐ, 35,521 ಪೊಲೀಸ್ ಕಾನ್ಸ್ ಟೇಬಲ್ ಗಳ ನೇಮಕ ಮಾಡಲಾಗಿದೆ. ರಾಜ್ಯದ ಜನಸಂಖ್ಯೆಗೆ ಪೊಲೀಸರ ಅನುಪಾತ 577 ಇದೆ. ಐದು ವರ್ಷದ ಹಿಂದೆ 35 ಸಾವಿರ ಹುದ್ದೆ ಖಾಲಿ ಇತ್ತು. ಆದರೆ ಈಗ ಎಸ್ ಐ ನೇಮಕಾತಿ ಆಗಿದೆ. ಅವರೆಲ್ಲಾ ತರಬೇತಿಯಲ್ಲಿದ್ದಾರೆ. ಟ್ರೈನಿಂಗ್ ಮುಗಿಸಿ ಬಂದರೆ ಎಲ್ಲಾ ಹುದ್ದೆ ಭರ್ತಿಯಾದಂತಾಗಲಿದೆ. ಕಾನ್ಸ್ ಟೇಬಲ್ ನೇಮಕಾತಿಯೂ ಆಗುತ್ತಿದೆ. ಪ್ರತಿ ವರ್ಷ ನಾಲ್ಕು ಸಾವಿರ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದರು.

ಗುಪ್ತಚರ ಇಲಾಖೆಯನ್ನು ಬಲಪಡಿಸಬೇಕಿದೆ. ಅಲ್ಲಿಗೆ ಬೇರೆ ಕಡೆಯಿಂದ ವರ್ಗಾವಣೆ ಮಾಡುವ ಬದಲು ಪ್ರತ್ಯೇಕ ನೇಮಕ ಮತ್ತು ತರಬೇತಿ ಕೊಡುವ ಚಿಂತನೆ ಇದೆ. ನಮ್ಮ ಪೊಲೀಸರನ್ನೇ ಯಾವುದೋ ಕಾರಣಕ್ಕೆ ಅಲ್ಲಿಗೆ ವರ್ಗಾಯಿಸಲಾಗುತ್ತಿದೆ. ಇದು ಆಗಬಾರದು, ಗುಪ್ತಚರ ವೈಫಲ್ಯದಿಂದ ದೊಡ್ಡ ಅನಾಹುತಗಳು ಸಂಭವಿಸಲಿವೆ. ಹಾಗಾಗಿ ಪ್ರತ್ಯೇಕ ನೇಮಕಾತಿ ಕುರಿತು ಸಿಎಂ ಜೊತೆ ಚರ್ಚಿಸಿದ್ದೇನೆ ಎಂದರು.

ಮೊದಲು ರಾಜ್ಯದಲ್ಲಿ 6 ಎಫ್ಎಸ್ಎಲ್ ಲ್ಯಾಬ್ ಗಳು ಇತ್ತು. ಈಗ ಇದನ್ನು ಹೆಚ್ಚಳ ಮಾಡಿ ಬಲಪಡಿಸಲಾಗಿದೆ. ಹುಬ್ಬಳ್ಳಿ, ಬಳ್ಳಾರಿಯಲ್ಲೂ ಎಫ್ಎಸ್ಎಲ್ ಪ್ರಾರಂಭ ಮಾಡಲಾಗಿದೆ. ಮೊದಲು ನಮಗೆ ಡಿಎನ್ ಎ ಸ್ಯಾಂಪಲ್ ವರದಿ ತಡ ಆಗುತ್ತಿತ್ತು. ಎರಡು ವರ್ಷ ತಡ ಆಗ್ತಿತ್ತು. ಈಗ ಹುಬ್ಬಳ್ಳಿಯಲ್ಲಿ ಡಿಎನ್ ಎ ಲ್ಯಾಬ್ ಪ್ರಾರಂಭ ಮಾಡಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.