ಮಂಗಳೂರು : ಪುತ್ತೂರಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಡ್ರೈಬೀನ್ಸ್ ಸರಬರಾಜು ವ್ಯವಹಾರದಲ್ಲಿ ವಂಚನೆ ಮಾಡಿದ್ದ ಆರೋಪಿಯನ್ನು ಮುಂಬೈಯಲ್ಲಿ ಬಂಧಿಸಲಾಗಿದೆ.
ವಿನ್ಸಿ ಪಿಂಟೋ ಬಂಧಿತ ಆರೋಪಿ. 2016ರಲ್ಲಿ ಕ್ಯಾಂಪ್ಕೋ ಸಂಸ್ಥೆಯು ಮಂಗಳೂರಿನ ಜೀವನ್ ಲೋಬೋ ಮಾಲೀಕತ್ವದ ಕೋಸ್ಪಾಕ್ ಏಶಿಯಾ ಇಂಟರ್ ನ್ಯಾಶನಲ್ ಸಂಸ್ಥೆಯ ಮೂಲಕ ವಿದೇಶದಿಂದ ಕೊಕ್ಕೋ ಬೀಜ ಖರೀದಿಗೆ ಷರತ್ತುಬದ್ದ ಖರೀದಿ ಆದೇಶವನ್ನು ನೀಡಿತ್ತು. ಅದರಂತೆ ಜೀವನ್ ಲೋಬೋ ವಿನ್ಸಿ ಪಿಂಟೋರವರ ಸಹ ಮಾಲಿಕತ್ವದಲ್ಲಿ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಬೀಜವನ್ನು ಸರಬರಾಜು ಮಾಡುತ್ತಿದ್ದರು.
ಆಫ್ರಿಕಾದಲ್ಲಿ ಬೆಳೆದ ಕೊಕ್ಕೋ ಬೀಜಗಳನ್ನು ಥಾಯಿಲೆಂಡ್ ದೇಶದಲ್ಲಿ ಬೆಳೆದ ಕೊಕ್ಕೋ ಬೀಜಗಳೆಂದು ನಕಲಿ ದಾಖಲೆ ಸೃಷ್ಠಿಸಿ, ಖೋಟಾ ಗುರುತು ಮತ್ತು ಸೃಷ್ಠಿಸಿದ ಪೋರ್ಜರಿ ದಾಖಲೆಗಳಿಂದ ನಂಬಿಸಿ ಥಾಯಿಲೆಂಡ್ ದೇಶದ ಉತ್ಪನ್ನವೆಂದು ನಂಬಿಸಿ ಆರೋಪಿಗಳು ಕ್ಯಾಂಪ್ಕೋ ಸಂಸ್ಥೆಗೆ ಮಾರಾಟ ನಡೆಸಿ ವಂಚನೆ ಮಾಡಿದ್ದಾರೆ. ಇದರಿಂದಾಗಿ ಸಂಸ್ಥೆಗೆ ರೂ. 9,71,50,113 ನಷ್ಟ ಉಂಟು ಮಾಡಿದ್ದಾರೆ ಎಂದು ಕ್ಯಾಂಪ್ಕೋ ಸಂಸ್ಥೆಯ ಡೆಪ್ಯುಟಿ ಜನ್ ರಲ್ ಮೆನೇಜರ್ ಫ್ರಾನ್ಸಿಸ್ ಡಿಸೋಜ ಅವರು 20-6-2020ರಂದು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಾದ ಬಳಿಕ ಆರೋಪಿಗಳಾದ ಜೀವನ್ ಲೋಬೋ ಮತ್ತು ವಿನ್ಸಿ ಪಿಂಟೋ ತಲೆಮರೆಸಿಕೊಂಡಿದ್ದರು. ತಲೆಮರೆಸಿಕೊಂಡಿದ್ದ ಆರೋಪಿ ವಿನ್ಸಿ ಪಿಂಟೋ ಎಂಬವನ ವಿರುದ್ದ ಲುಕ್ ಔಟ್ ನೋಟೀಸ್ ನೀಡಲಾಗಿತ್ತು. ಈತನನ್ನು ಮಂಗಳವಾರ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಿಂದ ಹೊರಡಿಸಿ ಲುಕ್ ಔಟ್ ನೋಟೀಸ್ ಆಧಾರದಲಿ ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಆರೋಪಿ ವಿನ್ಸಿ ಪಿಂಟೋ ನನ್ನು ಬಳಿಕ ಪುತ್ತೂರು ನಗರ ಠಾಣೆಗೆ ಕರೆತರಲಾಗಿತ್ತು. ಆರೋಪಿಯನ್ನು ದಸ್ತಗಿರಿ ಮಾಡಿರುವ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.










