ಕೋಲಾರ : ಕೌಟುಂಬಿಕ ಕಲಹ ಹಿನ್ನಲೆ ಸ್ವಂತ ಮಗನೇ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರದ ಅಂಬೇಡ್ಕರ್ ಪಾಳ್ಯದಲ್ಲಿ ನಡೆದಿದೆ.
ಅಂಬೇಡ್ಕರ್ ಪಾಳ್ಯದ ವೆಂಕಟೇಶ್ (65) ಮೃತ ವ್ಯಕ್ತಿ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ನವೀನ್ ಹಾಗೂ ವೆಂಕಟೇಶ್ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಆರಂಭವಾಗಿದೆ. ಬಳಿಕ ಜಗಳ ತಾರಕಕ್ಕೆ ಏರಿ ನವೀನ್ ಮನೆಯಲ್ಲಿದ್ದ ರುಬ್ಬುವ ಗುಂಡಿನಿಂದ ವೆಂಕಟೇಶ್ ಅವರ ತಲೆಗೆ ಹೊಡೆದಿದ್ದಾನೆ. ತಲೆಗೆ ರುಬ್ಬುವ ಗುಂಡುನಿಂದ ಹೊಡೆದ ಪರಿಣಾಮ ವೆಂಕಟೇಶ್ ತೀವ್ರ ರಕ್ತ ಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮನೆ ಮಂದಿಯ ಚೀರಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ನವೀನ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ನವೀನ್ ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










