ತಮಿಳು ನಟ, ನಿರ್ದೇಶಕ ಜಿ.ಮಾರಿಮುತ್ತು ಹೃದಯಾಘಾತದಿಂದ ನಿಧನ…

69
firstsuddi

ತಮಿಳು ನಟ ಮತ್ತು ನಿರ್ದೇಶಕ ಜಿ.ಮಾರಿಮುತ್ತು ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಟಿವಿ ಶೋ ಒಂದರ ಡಬ್ಬಿಂಗ್ ವೇಳೆ ಕುಸಿದು ಬಿದ್ದು ನಟ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇಂದು ಬೆಳಿಗ್ಗೆ ಮಾರಿಮುತ್ತು ಅವರು ಟಿವಿ ಶೋ ಒಂದರ ಡಬ್ಬಿಂಗ್​ನಲ್ಲಿ ಭಾಗಿ ಆಗಿದ್ದರು. ಚೆನ್ನೈನ ಸ್ಟುಡಿಯೋದಲ್ಲಿ ಈ ಡಬ್ಬಿಂಗ್ ಕೆಲಸ ನಡೆಯುತ್ತಿತ್ತು. ಅವರು ಡಬ್ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರ ಸಹೋದ್ಯೋಗಿಗಳು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ಮಾರಿಮುತ್ತು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ಮೃತದೇಹವನ್ನು ಸ್ಥಳಾಂತರಿಸಲಾಗಿದೆ.

‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 650 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಚಿತ್ರದಲ್ಲಿ ವಿಲನ್ ವರ್ಮಾನ (ವಿನಾಯಕನ್) ಸಹಚರನಾಗಿ ಮಾರಿಮುತ್ತು ಕಾಣಿಸಿಕೊಂಡಿದ್ದರು. ಅವರ ಪಾತ್ರ ಕೂಡ ಗಮನ ಸೆಳೆದಿತ್ತು. ಸಿನಿಮಾ ಹಿಟ್ ಆದ ಖುಷಿಯಲ್ಲಿದ್ದಾಗಲೇ ಅವರು ಮೃತಪಟ್ಟಿರೋದು ಬೇಸರದ ಸಂಗತಿ.

ಮಾರಿಮುತ್ತು ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1999ರಲ್ಲಿ. ಅಜಿತ್ ಕುಮಾರ್ ನಟನೆಯ ‘ವಾಲಿ’ ಅವರ ನಟನೆಯ ಮೊದಲ ಸಿನಿಮಾ. ಬಳಿಕ ಅವರು ಹಲವು ಪೋಷಕ ಪಾತ್ರದಲ್ಲಿ ನಟಿಸಿದ್ದರು. ‘ತೇರಿ’ ಸಿನಿಮಾದಲ್ಲಿ ಅವರು ರಾಜಕಾರಣಿಯ ಪಾತ್ರ ಮಾಡಿದ್ದರು. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರದಲ್ಲಿ ಅವರು ನಟಿಸುತ್ತಿದ್ದರು. ಸಿನಿಮಾ ಶೂಟಿಂಗ್​ ಪ್ರಗತಿಯಲ್ಲಿರುವಾಗಲೇ ಮಾರಿಮುತ್ತು ಅವರು ಸಾವನ್ನಪ್ಪಿದ್ದಾರೆ.

ಹೆಸರಾಂತ ಚಲನಚಿತ್ರ ನಿರ್ಮಾಪಕರಾದ ಮಣಿರತ್ಮಂ, ವಸಂತ್, ಸೀಮಾನ್ ಮತ್ತು ಎಸ್.ಜೆ ಸೂರ್ಯ ಅವರೊಂದಿಗೆ ಕೆಲಸ ಮಾಡಿದ್ದಾರೆ. ಸಿಲಂಬಸರನ್ ಅವರ ‘ಮನ್ಮಧನ್’ ಸಿನಿಮಾದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ನಟನ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.