ತಾಯಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಮೊಬೈಲ್ ಕೊಡದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!

107
firstsuddi

ಮಂಗಳೂರು : ತಾಯಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಹಾಸ್ಟೆಲ್ ವಾರ್ಡನ್ ಮೊಬೈಲ್ ಕೊಡಲಿಲ್ಲವೆಂದು ಮನನೊಂದ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಲಪಾಡಿ ಕೆ.ಸಿ.ರೋಡ್ ಬಳಿ ಇರುವ ಶಾರದ ವಿದ್ಯಾನಿಕೇತನ ಶಾಲೆಯ ಹಾಸ್ಟೆಲ್ ನಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದ 14 ವರ್ಷದ ಬಾಲಕ ಪೂರ್ವಾಜ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಶನಿವಾರ (ಜೂನ್ 11) ಬಾಲಕ ತನ್ನ ತಾಯಿಗೆ ಕರೆ ಮಾಡಿ ಶುಭಾಶಯ ಕೋರಲು ಮೊಬೈಲ್ ಕೇಳಿದಾಗ ಶಾಲಾ ಆಡಳಿತ ಮಂಡಳಿಯ ನಿಯಮದಂತೆ ಹಾಸ್ಟೆಲ್ ವಾರ್ಡನ್ ತಿರಸ್ಕರಿಸಿದ್ದರು ಎನ್ನಲಾಗ್ತಿದೆ.

ತಾಯಿಯೊಂದಿಗೆ ಮಾತನಾಡಲು ಅವಕಾಶ ನೀಡದ್ದಕ್ಕೆ ತೀವ್ರವಾಗಿ ನೊಂದಿದ್ದ ಪೂರ್ವಜ್ ಜೂನ್ 11 ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಬೆಳಗ್ಗೆ ಹಾಸ್ಟೆಲ್ ನಲ್ಲಿದ್ದ ಇತರೆ ವಿದ್ಯಾರ್ಥಿಗಳು ಬಾಲಕ ಶವವನ್ನು ಕಂಡು ಹಾಸ್ಟೆಲ್ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹಾಸ್ಟೆಲ್ ಸಿಬ್ಬಂದಿ ಬಾಲಕನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಹಾಸ್ಟೆಲ್ ಗೆ ಬಂದ ಪೂರ್ವಜ್ ತಾಯಿ, ತಮ್ಮ ಮಗನಿಗೆ ಹಾಸ್ಟೆಲ್ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.