ರಾಂಚಿ : ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಾಯಿಯ ಎದುರೇ ಐವರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಜಾರ್ಖಂಡ್ ನ ದಿಯೋಘರ್ ಜಿಲ್ಲೆಯಲ್ಲಿ ನಡೆದಿದೆ.
ದುಮ್ಕಾ ಜಿಲ್ಲೆಯ ನಿವಾಸಿಗಳಾದ ಬಾಲಕಿ ಮತ್ತು ಆಕೆಯ ತಾಯಿ ಭಾನುವಾರ ದಿಯೋಘರ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್ ಮನೆಗೆ ಹಿಂದಿರುಗುತ್ತಿದ್ದಾಗ ಅವರಿದ್ದಲ್ಲಿಗೆ 2 ಬೈಕ್ ನಲ್ಲಿ ಐವರು ಬಂದಿದ್ದಾರೆ. ಅಷ್ಟೇ ಅಲ್ಲದೇ ತಾಯಿ ಹಾಗೂ ಬಾಲಕಿಯು ಹೋಗುತ್ತಿದ್ದ ದಾರಿಯನ್ನು ತಪ್ಪಿಸಿದ್ದಾರೆ.
ಬಳಿಕ ಮಧುಪುರ ಪ್ರದೇಶದಲ್ಲಿ ಬಾಲಕಿಯನ್ನು ಬಲವಂತವಾಗಿ ಪಕ್ಕಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ತಾಯಿ ತಡೆಯಲು ಮುಂದಾದಾಗ ಆಕೆಯನ್ನು ಥಳಿಸಿ ನಂತರ ಆಕೆಯ ಎದುರೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ಸಂಬಂಧ ಇಲ್ಲಿಯವರೆಗೆ ಇಬ್ಬರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಬಂಧನಕ್ಕಾಗಿ ದಿಯೋಘರ್ ಪೊಲೀಸರು ವಿಶೇಷ ತನಿಖಾ ತಂಡವನ್ನು(ಎಸ್ ಐಟಿ) ರಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.










