ಹೈದರಾಬಾದ್ : ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ತಿರುಮಲ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು 2023 ರ ವೇಳೆಗೆ ಆರರಿಂದ ಎಂಟು ತಿಂಗಳವರೆಗೆ ಮುಚ್ಚುವ ಸಾಧ್ಯತೆಯಿದೆ.
ತಿರುಮಲದ ಮುಖ್ಯ ಗರ್ಭಗುಡಿ ಮೇಲೆ ಇರುವ ವಿಮಾನ ಆಕೃತಿಯ (ಮೂರು ಅಂತಸ್ತು) ಗೋಪುರ ಆನಂದ ನಿಲಯಕ್ಕೆ ಹೊದಿಸಲಾಗಿದ್ದ ಚಿನ್ನದ ಲೇಪನವನ್ನು ಬದಲಿಸಲು ತಿರುಮಲ ತಿರುಪತಿ ದೇವಸ್ಥಾನಂ ನಿರ್ಧರಿಸಿದೆ. ಈ ಸಮಯದಲ್ಲಿ ಭಕ್ತರು ತಿಮ್ಮಪ್ಪನ ದರ್ಶನ ಪಡೆಯೋದಕ್ಕಾಗಿ ಮುಖ್ಯ ದೇವಾಲಯದ ಪಕ್ಕದಲ್ಲಿ ತಾತ್ಕಾಲಿಕವಾಗಿ ತಿರುಪತಿ ವೆಂಕಟೇಶ್ವರ ದೇವರ ತದ್ರೂಪಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಲು ಯೋಜಿಸಲಾಗಿದೆ.
ಫೆಬ್ರವರಿಯಲ್ಲಿ ಕೆಲಸ ಆರಂಭಗೊಳ್ಳಲಿದ್ದು, ಈ ಚಿನ್ನದ ಲೇಪನದ ಕಾರ್ಯ ಪೂರ್ಣಗೊಳ್ಳಲು 6 ತಿಂಗಳು ಬೇಕಾಗಬಹುದು ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಬರಾವ್ ತಿಳಿಸಿದ್ದಾರೆ.










