ತೆಲುಗಿನ ಹಿರಿಯ ನಟ ಕೈಕಾಲ ಸತ್ಯನಾರಾಯಣ ವಿಧಿವಶ…

59
firstsuddi

ತೆಲುಗು ಸಿನಿಮಾ ರಂಗದ ಹಿರಿಯ ನಟ ಕೈಕಾಲ ಸತ್ಯನಾರಾಯಣ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಿಪಾಯಿ ಕೂತುರು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸತ್ಯನಾರಾಯಣ ಈವರೆಗೂ ಏಳು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1962ರಲ್ಲಿ ತೆರೆಗೆ ಬಂದ ರಾಜಕುಮಾರ್ ನಟನೆಯ ಸ್ವರ್ಣಗೌರಿ ಸಿನಿಮಾದಲ್ಲಿ ಇವರು ಶಿವನ ಪಾತ್ರಧಾರಿಯಾಗಿ ನಟಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತೆರೆಕಂಡ ಮಹೇಶ್ ಬಾಬು ನಟನೆಯ ಮಹರ್ಷಿ ಇವರ ನಟನೆಯ ಕೊನೆಯ ಸಿನಿಮಾವಾಗಿದೆ.

ಕೈಕಾಲ ಸತ್ಯನಾರಾಯಣ ಅವರು 1935ರ ಜುಲೈ 25ರಂದು ಆಂಧ್ರ ಪ್ರದೇಶದಲ್ಲಿ ಜನಿಸಿದರು. 1959ರಂದು ಅವರು ಚಿತ್ರರಂಗಕ್ಕೆ ಕಾಲಿಟ್ಟರು. 1960ರಲ್ಲಿ ನಾಗೇಶ್ವರಮ್ಮ ಅವರನ್ನು ಮದುವೆ ಆದರು. ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಸತ್ಯನಾರಾಯಣ ಅವರ ನಿಧನ ಸುದ್ದಿ ಕೇಳಿ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ.