ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ಬಗೆಗಿನ ಅಶ್ಲೀಲ ಹೇಳಿಕೆ ಆರೋಪದ ಹಿನ್ನಲೆ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ದೂರು ದಾಖಲಾಗಿದೆ.
ನಟಿ ತ್ರಿಷಾ ಬಗ್ಗೆ ಮನ್ಸೂರ್ ಅಲಿ ಖಾನ್ ಅವರು ನೀಡಿದ್ದ ಕೀಳು ಹೇಳಿಕೆಗೆ ಅನೇಕರಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪೊಲೀಸ್ ಕೇಸ್ ದಾಖಲಾಗಿದೆ. ಮನ್ಸೂರ್ ಅಲಿ ಖಾನ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ನವೆಂಬರ್ 21ರಂದು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಐಪಿಸಿ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ), 509 (ಮಹಿಳೆಯರ ಘನತೆಗೆ ಧಕ್ಕೆ) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮಹಿಳಾ ಆಯೋಗದ ಆದೇಶದ ಬಳಿಕ ಪೊಲೀಸರು ಮನ್ಸೂರ್ ಅಲಿ ಖಾನ್ ವಿರುದ್ಧ ಈ ಕೇಸ್ ದಾಖಲಿಸಿದ್ದಾರೆ.
ಏನಿದು ಪ್ರಕರಣ?
ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ನಟಿಸಿದ್ದಾರೆ. ಅದೇ ಸಿನಿಮಾದಲ್ಲಿ ಮನ್ಸೂರ್ ಅಲಿ ಖಾನ್ ಕೂಡ ಅಭಿನಯಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುವಾಗ, ‘ಈ ಚಿತ್ರದಲ್ಲಿ ತ್ರಿಷಾ ಅವರ ಜೊತೆ ನನಗೆ ಬೆಡ್ ರೂಂ ಸೀನ್ ಇರಲಿಲ್ಲ. ಬೇರೆ ಸಿನಿಮಾಗಳಲ್ಲಿ ನಾನು ರೇಪ್ ಸೀನ್ ಮಾಡಿದ್ದೇನೆ. ಈ ಸಿನಿಮಾದಲ್ಲಿ ಕೂಡ ನಾನು ತ್ರಿಷಾ ಅವರನ್ನು ಬೆಡ್ ರೂಮ್ಗೆ ಎಳೆದುಕೊಂಡು ಹೋಗುವ ದೃಶ್ಯ ಇರುತ್ತದೆ ಎಂದು ಭಾವಿಸಿದ್ದೆ. ಆದರೆ ಶೂಟಿಂಗ್ ವೇಳೆ ಚಿತ್ರತಂಡದವರು ನನಗೆ ತ್ರಿಷಾರ ಮುಖವನ್ನೂ ತೋರಿಸಲಿಲ್ಲ’ ಎಂದು ಹೇಳಿದ್ದರು. ಅದು ವಿವಾದಕ್ಕೆ ಕಾರಣ ಆಗಿದೆ.
ಅನೇಕ ಸೆಲೆಬ್ರಿಟಿಗಳು ಮನ್ಸೂರ್ ಅಲಿ ಖಾನ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ನಟ ಮನ್ಸೂರ್ ಅಲಿ ಖಾನ್ ಹೇಳಿಕೆ ವಿರುದ್ಧ ಆಯೋಗವು ಸ್ವಯಂ ದೂರು ದಾಖಲಿಸಿಕೊಂಡಿದೆ. ತಮಿಳುನಾಡು ಡಿಜಿಪಿ ಈ ಪ್ರಕರಣದಲ್ಲಿ ನಟನ ವಿರುದ್ಧ ಕ್ರಮ ಕೈಗೊಳ್ಳಬೇಕು. ನಟ ನೀಡಿರುವ ಇಂಥ ಹೇಳಿಕೆಗಳಿಂದ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತದೆ. ಇದನ್ನು ಖಂಡಿಸಬೇಕು’ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ತ್ರಿಷಾ, ‘ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ ವೀಡಿಯೋ ಗಮನಿಸಿದ್ದೇನೆ. ಮಹಿಳೆಯರ ಬಗ್ಗೆ ಅಗೌರವಯುತವಾಗಿ, ಕೆಟ್ಟದಾಗಿ ಮಾತನಾಡಿರುವ ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅಂಥ ವ್ಯಕ್ತಿ ಜೊತೆ ನಾನೆಂದೂ ನಟಿಸಲಾರೆ. ನನ್ನ ಇಡೀ ಜೀವನದಲ್ಲಿ ಮುಂದೆಂದೂ ಇಂಥವರ ಜೊತೆ ತೆರೆ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸುತ್ತೇನೆ. ಇಂಥ ಜನರು ಇಡೀ ಮನುಷ್ಯಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ’ ಎಂದು ತ್ರಿಷಾ ಪ್ರತಿಕ್ರಿಯೆ ನೀಡಿದ್ದಾರೆ.










