ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಮೊಳೆ ಹಾಕಿದ್ದ ಪ್ರಕರಣ – ಇಬ್ಬರನ್ನು ಬಂಧಿಸಿದ ಪೊಲೀಸರು…

90
firstsuddi

ಚಿಕ್ಕಮಗಳೂರು : ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ಸಾಗುವ ರಸ್ತೆಯುದ್ದಕ್ಕೂ ಮೊಳೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಚಿಕ್ಕಮಗಳೂರಿನ ದುಬೈ ನಗರ ನಿವಾಸಿಗಳಾದ ಮಹಮದ್ ಶಹಬಾಸ್ ಹಾಗೂ ವಾಹೀದ್ ಹುಸೇನ್ ಎಂದು ಗುರುತಿಸಲಾಗಿದೆ.

ಡಿಸೆಂಬರ್ 6, 7 ಮತ್ತು 8 ರಂದು ನಗರದಲ್ಲಿ ದತ್ತಜಯಂತಿ ಕಾರ್ಯಕ್ರಮವಿತ್ತು. ದತ್ತ ಜಯಂತಿಗೆ ತೆರಳುವ ಭಕ್ತರಿಗೆ ತೊಂದರೆ ಕೊಡುವ ಉದ್ದೇಶದಿಂದ ದತ್ತಪೀಠದ ಮಾರ್ಗದಲ್ಲಿ ಸಣ್ಣ-ಸಣ್ಣ ಮೊಳೆ ಚೆಲ್ಲಿದ್ದರು. ಇದರಿಂದ ಪೊಲೀಸ್ ಸೇರಿದಂತೆ ನಾಲ್ಕೈದು ವಾಹನಗಳು ಮಾರ್ಗ ಮಧ್ಯೆಯೇ ಪಂಚರ್ ಆಗಿದ್ದವು. ವಿಷಯ ತಿಳಿದ ಬಜರಂಗದಳ ಕಾರ್ಯಕರ್ತರು ಹಾಗೂ ಪೊಲೀಸರು ಮೊಳೆಗಳನ್ನು ತೆರವುಗೊಳಿಸಿದ್ದರು.

ಘಟನೆ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ಕೂಡ ದಾಖಲಿಸಿಕೊಂಡಿದ್ದರು. ಕಳೆದ ಎಂಟತ್ತು ದಿನಗಳಿಂದ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನೂ ಐದಾರು ಜನ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಇದ್ದು ಪೊಲೀಸರು ಅವರಿಗೂ ಬಲೆ ಬೀಸಿದ್ದಾರೆ.