ದನ ಕಾಯೋಕೆ ಹೋಗು, ಇಒ ಆಗಿದ್ದೀಯ ನೀನು ; ಅಧಿಕಾರಿಗೆ ಏಕವಚನದಲ್ಲೇ ಹರಿಹಾಯ್ದ ಹೆಚ್.ಡಿ.ರೇವಣ್ಣ.

138
firstsuddi

ಹಾಸನ : ಏಯ್ ನೀನು ದನ ಕಾಯೋಕೆ ಹೋಗು, ಇಒ ಆಗಿದ್ದೀಯ ನೀನು ಎಂದು ಅಧಿಕಾರಿಗೆ ಏಕವಚನದಲ್ಲೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಹರಿಹಾಯ್ದಿದ್ದಾರೆ.  ನಗರದ ಹೊರವಲಯದಲ್ಲಿರುವ ಹೇಮಗಂಗೋತ್ರಿ ಕಾಲೇಜು ಬಳಿ ನಿರ್ಮಾಣವಾಗುತ್ತಿರುವ ಟ್ರಕ್ ಟರ್ಮಿನಲ್ ವಿರೋಧಿಸಿ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ಕಾಮಗಾರಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಕಾಮಗಾರಿ ಪ್ರಾರಂಭವಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಎದುರೇ ತಾಲೂಕು ಪಂಚಾಯಿತಿ ಇಒ ಯಶವಂತ್ ಗೆ ರೇವಣ್ಣ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಏಯ್ ಸ್ನಾತಕೋತ್ತರ ಕೇಂದ್ರದ ಬಳಿ ಟ್ರಕ್ ಟರ್ಮಿನಲ್ ಆಗ್ತಿದೆ. ಈ ಬಗ್ಗೆ ನೀನು ಸರ್ಕಾರಕ್ಕೆ ಪತ್ರ ಬರೀಬೇಕಲ್ವಾ? ನೀನು ದನ ಕಾಯೋನು. ಏಯ್ ದನ ಮೇಯಿಸೋದು ಬಿಟ್ಟು ನಿನ್ಯಾವನು ಇಒ ಅಂತಾರೆ ! ಇಒ ಆಗಿದ್ದೀಯ ನೀನು, ದನಗಳ ಡಾಕ್ಟ್ರು ನೀನು? ದನಕ್ಕೆ ಇಂಜೆಕ್ಷನ್ ಕೊಡೊ ನಿನಗೇನು ಗೊತ್ತಿದೆ. ಏಯ್ ನೀನು ದನ ಕಾಯೋಕೆ ಹೋಗು” ಎಂದು ಎಂದು ಕಿಡಿಕಾರಿದರು. ಈ ವೇಳೆ ಕಾಮಗಾರಿ ನಡೆಸಲು ಡಿಸಿ ನಿರ್ದೇಶನ ನೀಡಿದ್ದರು ಹಾಗಾಗಿ ಕಾಮಗಾರಿ ನಡೆಸಿದ್ದೇವೆ ಎಂದು ಇಒ ತಿಳಿಸಿದರು. ಇಒ ಮಾತಿಗೆ ಮತ್ತಷ್ಟು ಗರಂ ಆದ ರೇವಣ್ಣ, ‘ಡಿಸಿ, ಮನೆಗೆ ನುಗ್ಗು ಅಂತಾನೆ ನುಗ್ಗುತ್ತೀಯಾ ನೀನು? ಏ ಪಿಎ ಕರೆಯೋ ಅವನ್ಯಾರು? ಡಿಸಿ. ಇವರಿಬ್ಬರು ಸೇರಿಕೊಂಡು ಅದೇನ್ ಮಾಡ್ತರೆ ಮಾಡ್ಲಿ. ಎಷ್ಟು ಹೆಣ ಉರುಳಿಸುತ್ತಾರೆ ಉರುಳಿಸಲಿ. ವರ್ಗಾವಣೆಗೋಸ್ಕರ ಈ ರೀತಿ ಮಾಡ್ತೀರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹೇಳಿದ್ದು, ಕೆಲಸ ನಿಲ್ಲಿಸುವುದಾಗಿ ಉತ್ತರಿಸಿದ್ದಾರೆ. ಜಿಲ್ಲಾ ಮಂತ್ರಿಗಳು ಬರಲಿ, ಕುಳಿತು ಮಾತನಾಡೋಣ ಎಂದಿದ್ದು, ಏನಾದರೂ ನಿಲ್ಲಿಸದಿದ್ರೆ ಅಲ್ಲಿ ಆಗುವ ಘಟನೆಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.