ದರ್ಶನ್ ಮೇಲೆ ನಡೆದ ಕೃತ್ಯ ನನ್ನ ಮನಸ್ಸನ್ನು ಘಾಸಿಗೊಳಿಸಿದೆ : ಕಿಚ್ಚ ಸುದೀಪ್.

155
firstsuddi

ಬಳ್ಳಾರಿಯ ಹೊಸಪೇಟೆಯಲ್ಲಿ ಭಾನುವಾರ ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಇಡೀ ಕನ್ನಡ ಚಿತ್ರರಂಗದವರನ್ನು ಘಾಸಿಗೊಳಿಸಿದೆ. ಬಹುತೇಕ ಕಲಾವಿದರು ಈ ಘಟನೆಯನ್ನು ಖಂಡಿಸಿ ದರ್ಶನ್ ಪರ ನಿಂತಿದ್ದಾರೆ. ಇದೀಗ ಕಿಚ್ಚ ಸುದೀಪ್ ಸಹ ಈ ಘಟನೆಯನ್ನು ಖಂಡಿಸಿ ಇಂದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪ್ರತಿಯೊಂದು ಸಮಸ್ಯೆಗೂ ಒಂದಲ್ಲಾ ಒಂದು ಪರಿಹಾರ ಇದ್ದೇ ಇರುತ್ತದೆ. ಯಾವುದೇ ಸಮಸ್ಯೆಯನ್ನು ಶಾಂತ ರೀತಿಯಲ್ಲಿ ಪರಿಹರಿಸಬಹುದು. ಅದರಲ್ಲೂ ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಘನತೆ ಇರುತ್ತದೆ. ಮೊನ್ನೆ ಹೊಸಪೇಟೆಯಲ್ಲಿ ನಡೆದ ಘಟನೆಯ ವಿಡಿಯೋ ನೋಡಿದ ಮೇಲೆ ನನ್ನ ಮನಸ್ಸಿಗೆ ತೀರಾ ನೋವಾಗಿದೆ. ಪಕ್ಕದಲ್ಲಿ ಚಿತ್ರದ ನಾಯಕಿ ಹಾಗೂ ಅನೇಕ ಮಂದಿ ಇದ್ದಾರೆ. ಅವರು ಈ ಯಾವುದೂ ಸಮಸ್ಯೆಗಳ ಭಾಗವಾಗಿಲ್ಲ, ಆದರೂ ಸಾರ್ವಜನಿಕ ವೇದಿಕೆಯಲ್ಲಿ ಅವರನ್ನು ಕೂಡ ಅವಮಾನ ಮಾಡುವುದು ನೋಡಿದರೆ ನಾವು ಕನ್ನಡಿಗರು ಇಂತಹ ಅನ್ಯಾಯದ ಪ್ರತಿಕ್ರಿಯೆಯನ್ನು ಎದುರಿಸಬೇಕೆ ಎಂಬ ಪ್ರಶ್ನೆ ಮೂಡುತ್ತಿದೆ. ಈ ರೀತಿ ಸಾರ್ವಜನಿಕ ಆಕ್ರೋಶ ತೋರಿಸುವುದು ಸಮಸ್ಯೆಗೆ ಪರಿಹಾರವೇ ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ.

ದರ್ಶನ್ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದಾಕ್ಷಣ ನನ್ನ ಮನಸ್ಸಿಗೆ ತಟ್ಟಿದ ವಾಸ್ತವ ವಿಷಯಗಳ ಬಗ್ಗೆ ಮಾತನಾಡುವುದನ್ನು ನಾನೆಂದಿಗೂ ನಿಲ್ಲಿಸುವುದಿಲ್ಲ. ಚಪ್ಪಲಿ ಎಸೆಯುವಂತಹ ಕೃತ್ಯಗಳಿಗೆ ಖಂಡಿತಾ ದರ್ಶನ್ ಅರ್ಹರಲ್ಲ, ಈ ಘಟನೆ ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ಕನ್ನಡ ಚಿತ್ರರಂಗ, ಈ ನಾಡಿನ ಜನರು ಉತ್ತಮ ನಡವಳಿಕೆಗೆ ಹೆಸರಾಗಿದೆ. ಭಾರತದಲ್ಲಿ ಕರ್ನಾಟಕ ಸಂಸ್ಕೃತಿಯಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ಹೀಗಿರುವಾಗ ನಾವು ಖಂಡಿತಾ ಇಂತಹ ಸಂದೇಶ ಹರಡಬಾರದು. ಪರಿಸ್ಥಿತಿಗೆ ಈ ರೀತಿ ಉದ್ರೇಕದಿಂದ ಕ್ರೋಧದಿಂದ ವರ್ತಿಸುವುದು ಖಂಡಿತಾ ಉತ್ತರವಲ್ಲ.

ನಟರು, ಅವರ ಅಭಿಮಾನಿಗಳ ಮಧ್ಯೆ ಭಿನ್ನಾಭಿಪ್ರಾಯಗಳಿರಬಹುದು, ಅದರ ಬಗ್ಗೆ ಮಾತನಾಡಲು ನಾನು ಯಾರೂ ಅಲ್ಲ, ಆದರೆ ನಾನು ದರ್ಶನ್ ಮತ್ತು ಪುನೀತ್ ಅವರಿಗೆ ಆಪ್ತನಾಗಿದ್ದವನು, ಅವರ ಜೀವನದಲ್ಲಿ ಹೊಂದಿದ್ದ ಸ್ಥಾನದಿಂದ ಇಂದು ನಾನು ಈ ರೀತಿ ನನ್ನ ಭಾವನೆಗಳನ್ನು ಬರೆಯಲು ಅರ್ಹನಾಗಿದ್ದೇನೆ ಎಂದು ಭಾವಿಸುತ್ತೇನೆ.

ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದರೆ ನನ್ನನ್ನು ಕ್ಷಮಿಸಿ, ಈ ಚಿತ್ರರಂಗದಲ್ಲಿ 27 ವರ್ಷಗಳಿಂದ ಪ್ರಯಾಣ ಮಾಡುತ್ತಿರುವ ನಾನು ಒಂದು ವಿಷಯವನ್ನಂತೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಯಾವುದೂ, ಯಾರೂ ಕೂಡ ಶಾಶ್ವತವಲ್ಲ, ಇರುವಷ್ಟು ದಿನ ಪ್ರೀತಿ, ಗೌರವವನ್ನು ಹಂಚಿ ಬೇರೆಯವರಿಂದ ಅದನ್ನು ಪಡೆಯೋಣ. ಇದೊಂದೇ ಕೊನೆಯವರೆಗೂ ಇರುವುದು ಎಂದು ಟ್ವೀಟ್ ಮಾಡಿದ್ದಾರೆ.