ಮೈಸೂರು : ನಾಡಹಬ್ಬ ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಆನೆ ಬಲರಾಮನಿಗೆ ಬಂದೂಕಿನಿಂದ ಗುಂಡು ಹೊಡೆದಿದ್ದ ಜಮೀನು ಮಾಲೀಕ ಸುರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರದಲ್ಲಿರುವ ಬಲರಾಮ ಆನೆ ಸಮೀಪದಲ್ಲಿದ್ದ ಜಮೀನಿಗೆ ಹೋಗಿತ್ತು. ಈ ವೇಳೆ ಜಮೀನಿನ ಮಾಲೀಕ ಸುರೇಶ್ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಆನೆಗೆ ಗುಂಡು ಹಾರಿಸಿದ್ದ. ಇದರಿಂದ ಬಲರಾಮ ಆನೆ ತೊಡೆ ಭಾಗಕ್ಕೆ ಗುಂಡು ಹೊಕ್ಕಿ ಗಾಯಗೊಂಡಿತ್ತು.
ವನ್ಯಜೀವಿ ಕಾಯ್ದೆ ಉಲ್ಲಂಘನೆ ಆರೋಪದಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಬಂದೂಕು, ಕಾರ್ಟ್ರಿಜ್ ನ್ನು ವಶಪಡಿಸಿಕೊಳ್ಳಲಾಗಿದೆ. ಜಮೀನು ಮಾಲೀಕನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಸದ್ಯ ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಬಲರಾಮ ಚೇತರಿಸಿಕೊಂಡಿದ್ದಾನೆ.










