ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಬಲರಾಮ (67) ಅನಾರೋಗ್ಯದಿಂದ ನಿನ್ನೆ ಮೃತಪಟ್ಟಿದೆ. ಬಲರಾಮ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
“ಹಲವು ವರ್ಷಗಳಿಂದ, ಗಜರಾಜ ಬಲರಾಮ ಮೈಸೂರಿನ ಸಾಂಪ್ರದಾಯಿಕ ದಸರಾ ಆಚರಣೆಯ ಪ್ರಮುಖ ಭಾಗವಾಗಿದ್ದನು. ಅವನು ಚಾಮುಂಡೇಶ್ವರಿ ಮಾತೆಯ ಮೂರ್ತಿಯನ್ನು ಹೊತ್ತಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವನು ಅಸಂಖ್ಯಾತ ಜನರಿಗೆ ಪ್ರೀತಿಪಾತ್ರನಾಗಿದ್ದನು. ಅವನ ಅಗಲಿಕೆಯಿಂದ ದುಃಖವಾಗಿದೆ. ಓಂ ಶಾಂತಿ” ಎಂದು ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ದಸರಾ ಗಜಪಡೆಯ ಮಾಜಿ ಕ್ಯಾಪ್ಟನ್ ಬಲರಾಮ ಆನೆ ಸಾವನ್ನಪ್ಪಿದೆ. ಅತ್ಯಂತ ಸೌಮ್ಯ ಸ್ವಭಾವದ ಬಲರಾಮ ಆನೆ ಎಲ್ಲರ ಪ್ರೀತಿ ಪಾತ್ರವಾಗಿತ್ತು. ಬಲರಾಮನಿಗೆ ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ಜೊತೆಗೆ ಬಾಯಿಯಲ್ಲಿ ಹುಣ್ಣಿನಿಂದ ಬಳಲುತ್ತಿದ್ದ ಬಲರಾಮ ಆಹಾರ ಸೇವಿಸದೇ ನೀರು ಕುಡಿಯದೇ ಅಸ್ವಸ್ಥಗೊಂಡಿತ್ತು. ವೈದ್ಯರ ಚಿಕಿತ್ಸೆಗೆ ಸ್ಪಂದಿಸದ ಬಲರಾಮ ಮೃತಪಟ್ಟಿತು.










