ಬೆಂಗಳೂರು/ಚಿಕ್ಕಮಗಳೂರು : ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಖ್ಯಾತ ಕವಿ, ಸಾಹಿತಿ ದಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ(84) ಅವರು ಇಂದು ವಿಧಿವಶರಾಗಿದ್ದಾರೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆ ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯಂನಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಾಜೇಶ್ವರಿ ತೇಜಸ್ವಿ ಅವರು ತತ್ವ ಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ ಮಾಡಲು ಮಾನಸ ಗಂಗೋತ್ರಿ ಮೈಸೂರಿಗೆ ಬಂದರು. ಆ ನಂತರ ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಇಬ್ಬರೂ ಪ್ರೀತಿಸಿ 1966ರಲ್ಲಿ ವಿವಾಹವಾದರು.
‘ನನ್ನ ತೇಜಸ್ವಿ’ ಎಂಬುದು ರಾಜೇಶ್ವರಿ ಅವರ ಮೊಟ್ಟ ಮೊದಲ ಪುಸ್ತಕವಾಗಿದ್ದು, ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಇವರ ಎರಡನೇಯ ಪುಸ್ತಕವಾಗಿದೆ. ರಾಜೇಶ್ವರಿ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಇಬ್ಬರೂ ಸಾಫ್ಟ್ ವೇರ್ ಇಂಜಿಯರ್ ಆಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿ ತೇಜಸ್ವಿ ನಿಧನದ ನಂತರ ರಾಜೇಶ್ವರಿ ತೇಜಸ್ವಿಯವರು ಅಪರೂಪದ ಹವ್ಯಾಸಗಳೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪದ ಕಾಫಿ ತೋಟದ ಮನೆಯಲ್ಲಿ ವಾಸವಿದ್ದರು.
ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ನಲ್ಲಿ ಸಂಜೆ 5:30ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ಅವರ ದೇಹದಾನ ಮಾಡಲು ಕುಟುಂಬ ನಿರ್ಧರಿಸಿದೆ.










