ರಾಯಚೂರು: ದುಬೈನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಮೂಲದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಮೃತರು ನಗರದ ಆಶಾಪುರ ರಸ್ತೆಯ ದ್ವಾರಕಾನಗರದ ನಿವಾಸಿಗಳು. ರಾಯಚೂರು ಕೃಷಿ ವಿವಿಯಲ್ಲಿ ಕುಲಪತಿಗಳ ಆಪ್ತ ಸಹಾಯಕರಾಗಿದ್ದ ಶಫಿ ಸುಳ್ಳೇದ್ (53), ಅವರ ಪತ್ನಿ ಸಿರಾಜ್ ಬೇಗಂ (45), ಪುತ್ರಿ ಶಿಫಾ (20), ತಾಯಿ ಬೇಬಿ ಜಾನ್ (64) ಮೃತ ದುರ್ದೈವಿಗಳು. ಅಪಘಾತದಲ್ಲಿ ಮೃತ ಶಫಿ ಸುಳ್ಳೇದ್ ಅವರ ಪುತ್ರ ಸಮೀರ್ ಗೆ ಗಂಭೀರವಾಗಿ ಗಾಯಗಳಾಗಿದ್ದು, ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫೆಬ್ರವರಿ 14 ರಂದು ಕುಟುಂಬ ರಾಯಚೂರಿನಿಂದ ಮೆಕ್ಕಾಗೆ ತೆರಳಿತ್ತು. ಫೆಬ್ರವರಿ 22 ರಂದು ಬೆಳಗಿನ ಜಾವ ಶಫಿ ಕುಟುಂಬ ಪ್ರಯಾಣಿಸುತ್ತಿದ್ದ ಬಸ್ ಕಂಟೇನರ್ ಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಚಾಲಕ ಸೇರಿ ಬಸ್ ನಲ್ಲಿದ್ದ ಹಲವರು ಸಾವನ್ನಪ್ಪಿದ್ದಾರೆ. ಮೃತರ ಒಟ್ಟು ಸಂಖ್ಯೆ ತಿಳಿದುಬಂದಿಲ್ಲ.
ಪವಿತ್ರ ಯಾತ್ರೆಗೆ ತೆರಳಿದ್ದ ವೇಳೆ ಅಪಘಾತ ಸಂಭವಿಸಿರುವುದರಿಂದ ದುಬೈನಲ್ಲೇ ಮೃತರ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಮೃತರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.










