ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 20 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ. ಕಳೆದ ವರ್ಷ ನವೆಂಬರ್ ನಲ್ಲಿ ತಂದ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಎಫ್ ಐಆರ್ ದಾಖಲಿಸಿದೆ.
ತಮ್ಮ ನಿವಾಸ ಮೇಲಿನ ದಾಳಿ ಬಗ್ಗೆ ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ, ಸಿಬಿಐ ಅಧಿಕಾರಿಗಳು ಇಲ್ಲಿ ನನ್ನ ಮನೆಯಲ್ಲಿದ್ದಾರೆ. ನಾನು ತನಿಖಾ ಸಂಸ್ಥೆಯೊಂದಿಗೆ ಸಹಕರಿಸುತ್ತೇನೆ. ಅವರಿಗೆ ನನ್ನ ವಿರುದ್ಧ ಏನೂ ಸಾಕ್ಷಿಗಳು ಸಿಗುವುದಿಲ್ಲ ಎಂಬ ನಂಬಿಕೆ ನನಗಿದೆ. ನಾವು ಪ್ರಾಮಾಣಿಕರು, ಲಕ್ಷಾಂತರ ಮಕ್ಕಳ ಭವಿಷ್ಯವನ್ನು ನಿರ್ಮಿಸುತ್ತೇವೆ. ದುರದೃಷ್ಟಕರ ಸಂಗತಿ ಎಂದರೆ ಈ ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ತೊಂದರೆಯಾಗುತ್ತದೆ. ಅದಕ್ಕಾಗಿಯೇ ನಮ್ಮ ದೇಶ ಇನ್ನೂ ನಂಬರ್ 1 ಆಗಿಲ್ಲ ಎಂದಿದ್ದಾರೆ.










