ದೆಹಲಿ ಮದ್ಯ ನೀತಿ ಹಗರಣ: ಬಿಆರ್‌ಎಸ್‌ ನಾಯಕಿ ಕವಿತಾ ಅರೆಸ್ಟ್…

39
firstsuddi

ಹೈದರಾಬಾದ್: ದೆಹಲಿ ಮದ್ಯ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಿಆರ್‌ಎಸ್‌ ನಾಯಕಿ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಟಿ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರನ್ನು ಬಂಧಿಸಿದೆ.

ಇಂದು ಕವಿತಾ ಅವರ ಹೈದರಾಬಾದ್ ನಿವಾಸದ ಮೇಲೆ ಇಡಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿತ್ತು. ಈ ವೇಳೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಸಂಜೆ ವೇಳೆ ವಿಧಾನ ಪರಿಷತ್ ಸದಸ್ಯೆಯಾಗಿರುವ ಕವಿತಾ ಅವರನ್ನು ಬಂಧಿಸಿದ್ದಾರೆ.

ಪ್ರಸ್ತುತ ಕೆ. ಕವಿತಾ ಅವರನ್ನು ಇಡಿ ಅಧಿಕಾರಿಗಳು ದೆಹಲಿಗೆ ಕರೆತಂದಿದ್ದಾರೆ. ಇಲ್ಲಿ ಮತ್ತಷ್ಟು ವಿಚಾರಣೆಗೊಳಪಡಿಸುವ ಸಾಧ್ಯತೆ ಹೆಚ್ಚಿದೆ. ದಾಳಿ ನಡೆಸಿದ ಸಮಯದಲ್ಲಿ ಅವರ ನಿವಾಸದಲ್ಲಿ ಇಡಿ ಹಾಗೂ ಬಿಆರ್‌ಎಸ್‌ ನಾಯಕ ಕೆಟಿಆರ್ ರಾವ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿರುವ ಕುರಿತು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಎಪಿ ನಾಯಕ ವಿಜಯ್ ನಾಯರ್ ಅವರು ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳ ನಿಯಂತ್ರಣದಲ್ಲಿರುವ ‘ದಕ್ಷಿಣ ಗುಂಪಿನಿಂದ’ 100 ಕೋಟಿ ರೂಪಾಯಿಗಳನ್ನು ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ. ಕವಿತಾ ಅವರು 100 ಕೋಟಿ ರೂಪಾಯಿ ಕಿಕ್‌ಬ್ಯಾಕ್ ಪಾವತಿಸಿದ ಮದ್ಯದ ಕಾರ್ಟೆಲ್ ‘ದಿ ಸೌತ್ ಗ್ರೂಪ್’ ನ ಭಾಗವಾಗಿದ್ದರು ಎಂದು ಇಡಿ ಆರೋಪಿಸಿದೆ.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಮಿತ್ ಅರೋರಾ 10ಕ್ಕೂ ಹೆಚ್ಚು ಬಾರಿ ಕವಿತಾಗೆ ದೂರವಾಣಿ ಕರೆ ಮಾಡಿದ್ದು, ಒಟ್ಟು 35 ಜನರನ್ನು ಸಂಪರ್ಕಿಸಲು ಅವರು ಪ್ರಯತ್ನಿಸಿದ್ದಾರೆ ಎಂದು ಇಡಿ ಹೇಳಿತ್ತು.

ಇಡಿ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಕೆ ಕವಿತಾ ಅವರ ಹೆಸರಿಸಿದೆ. ಅವರು ಮದ್ಯದ ಕಂಪನಿಯಾದ ಇಂಡೋಸ್ಪಿರಿಟ್ಸ್‌ನಲ್ಲಿ ಶೇ.65 ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಏನಿದು ಮದ್ಯ ಹಗರಣ?
ಪ್ರಕರಣದ ಆರೋಪಿಯಾಗಿರುವ ಮನೀಶ್ ಸಿಸೋಡಿಯಾ ಹಾಗೂ ಇತರರು 2021-22 ರ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಪ್ರಾಧಿಕಾರದ ಅನುಮೋದನೆಯಿಲ್ಲದೇ ಪರವಾನಗಿದಾರರಿಗೆ ಅನುಕೂಲವಾಗುವಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ನೀತಿಯಿಂದ ಲಾಭ ಪಡೆದ ಮದ್ಯ ವ್ಯಾಪಾರಿಗಳು ಸಿಸೋಡಿಯಾ ಆಪ್ತ, ಸಹಚರರಿಗೆ ಕೋಟ್ಯಂತರ ರೂ. ಪಾವತಿ ಮಾಡಿದ್ದಾರೆ ಎಂಬ ಆರೋಪ ಬಂದಿದೆ.