ಹಾಸನ : ದೇವೇಗೌಡರು ಪ್ರಧಾನಿ ಆಗಿದ್ದವರು. ಈ ದೇಶದ ದೊಡ್ಡ ಹುದ್ದೆಗೆ ಏರಿದ್ದವರು. ಅಂತಹ ಮಹಾನ್ ನಾಯಕನನ್ನೇ ಜಿಲ್ಲೆಯಿಂದ ಹೊರದಬ್ಬಿದವರು ನನ್ನನ್ನು ಬಿಡ್ತಾರಾ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಶಾಸಕ ಎ.ಟಿ.ರಾಮಸ್ವಾಮಿ ಹರಿಹಾಯ್ದಿದ್ದಾರೆ.
ಜಿಲ್ಲೆಯ ಹೊಳೆನರಸೀಪುರದಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜನವರಿ 22ರಂದು ನಾನು ಕಾರ್ಯಕ್ರಮ ಆಯೋಜನೆ ಮಾಡಿದ್ದೆ, ಆ ಕಾರ್ಯಕ್ರಮಕ್ಕೆ ದೇವೇಗೌಡರನ್ನ ಆಹ್ವಾನ ಮಾಡಲು ಬೆಂಗಳೂರು ಹೋಗಿದ್ದೆ, ಆರೋಗ್ಯ ಕಾಪಾಡಿಕೊಳ್ಳಿ ಇನ್ನೊಂದು ದಿನ ಮಾತಾಡೋಣ ಅಂತ ಹೇಳಿದೆ.ಆದರೆ ಅವರು ರಾಜಕೀಯ ಮಾತಾಡೋಕೆ ಶುರು ಮಾಡಿದ್ರು. ನನ್ನ ಕೈ ಹಿಡ್ಕೊಂಡ್ರು ನಿನಗೆ ಏನು ಕಿರುಕುಳ ಕೊಡುತ್ತಿದ್ದಾರೆ ಏನು ಅನ್ಯಾಯ ಆಗ್ತಿದೆ ನನಗೆ ಗೊತ್ತು, ನಾನು ಬದುಕಿರೋ ತನಕ ಅನ್ಯಾಯ ಆಗುವುದಕ್ಕೆ ಬಿಡಲ್ಲ ಅಂದಿದ್ರು. ಅಂತಹ ಮುತ್ಸದ್ದಿ ರಾಜಕಾರಣಿಯನ್ನ ಮೂಲೆಗುಂಪು ಮಾಡಿದ್ದು ನನಗೆ ತುಂಬಾ ನೋವಾಗಿದೆ ಎಂದರು.
ಇವರ ಸ್ವಾರ್ಥಕ್ಕಾಗಿ ನನ್ನನ್ನ ಬಲಿ ಕೊಡೋಕೆ ಹೊರಟಿಲ್ಲ. ನಮ್ಮ ಜನರನ್ನ ಮತ್ತು ನಮ್ಮ ರೈತರನ್ನ ಬಲಿ ಕೊಡೋಕೆ ಹೊರಟಿದ್ದಾರೆ. ನಾನು ಕೆಟ್ಟವನು ಅವರಿಗೆ ಟಿಕೆಟ್ ಕೊಡಬೇಡಿ ಎಂದು ಜನರಿಂದ ಹೇಳಿಸಿದ್ರು ಆದರೆ, ನಾನು ಅವರ ಹಾಗೆ ಮೈಕ್ ಹಾಕಿಕೊಂಡು ಮನೆ ಮುಂದೆ ಗಲಾಟೆ ಮಾಡಲು ಆಗುತ್ತಾದಾ ಎನ್ನುವ ಮೂಲಕ ಹೆಚ್ ಡಿ ರೇವಣ್ಣ ಮತ್ತು ಅವರ ಪುತ್ರರ ವಿರುದ್ಧ ಎ ಟಿ ರಾಮಸ್ವಾಮಿ ಗುಡುಗಿದ್ದಾರೆ.
ಇಡೀ ರಾಜ್ಯಕ್ಕೆ ಎ ಟಿ ರಾಮಸ್ವಾಮಿ ಎಂತಹ ಮನುಷ್ಯ ಎಂಬುದು ಗೊತ್ತಿದೆ ಅವತ್ತು ನಾನು ಇಡೀ ರಾತ್ರಿ ನಿದ್ದೆ ಮಾಡಿಲ್ಲ ನನ್ನ ಕಾರ್ಯಕ್ರಮಕ್ಕೆ ದೇವೇಗೌಡರ ಟೂರ್ ಪ್ಲಾನ್ ರೆಡಿ ಆಗಿತ್ತು ಆದರೆ ಬೆಳಗ್ಗೆ ಕಾರ್ಯಕ್ರಮವೇ ರದ್ದಾಗಿದೆ ಅಂತ ಹೇಳಿ ಮೆಸೇಜ್ ಹಾಕ್ತಾರೆ. ಅಂದ್ರೆ ಅಂತಹ ದೇವೇಗೌಡರನ್ನೇ ಉತ್ಸವ ಮೂರ್ತಿಯಾಗಿ ಮಾಡಿರೋ ಅವರು ನನ್ನನ್ನ ಬಿಡ್ತಾರಾ? ನಮ್ಮ ಕಾರ್ಯಕ್ರಮಕ್ಕೆ ಹೋಗಬಾರದು ಅಂತ ಕುಟುಂಬದವರೇ ತಡೆದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಇನ್ನೂ ಹಾಸನ ಲೋಕಸಭಾ ಚುನಾವಣೆ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಎಲ್ಲರೂ ಪ್ರಜ್ವಲ್ ರೇವಣ್ಣ ಅಂತ ಹೇಳಿದ್ರು, ನಾನು ಹೇಳಲಿಲ್ಲ ಅಲ್ಲಿಂದಲೇ ಶುರುವಾಯಿತು ನನ್ನ ಮೇಲೆ ಹಗೆ. ತನ್ನ ದೇವೇಗೌಡರು ನಿವೃತ್ತಿ ಹಾಕ್ತೀನಿ ಅಂದಿದ್ರೆ ನಾನು ಹೆಸರು ಹೇಳ್ತಿದ್ದೆ ಅವರು ನಿಂತ್ಕೊಳ್ತೀನಿ ಅಂತಿರುವಾಗ ಜಿಲ್ಲೆಯಿಂದ ಹೊರದಬ್ಬಿದ್ರು ಎಂದು ಅಸಮಾಧಾನ ಹೊರಹಾಕಿದರು.
ಇನ್ನು ಸಂಸದ ಪ್ರಜ್ವಲ್ ವಿರುದ್ಧ ಆಸ್ತಿ ಘೋಷಣೆ ವಿಚಾರವಾಗಿ ನ್ಯಾಯಾಲಯದಲ್ಲಿ ವಾದ ವಿವಾದ ನಡೆಯುತ್ತಿದೆ ತೀವ್ರತರವಾದ ವಿಚಾರಣೆ ನಡೆಯುತ್ತಿರುವುದರಿಂದ ಶಿಕ್ಷೆ ಆಗುತ್ತದೆ ಎಂಬ ವಿಚಾರ ಗೊತ್ತಾಗಿದೆ. ಹಾಗಾಗಿ ಕೇಸ್ ಅನ್ನ ರಾಜಿ ಮಾಡ್ಕೊಳಕ್ಕಾಗಿ ಸ್ವಾರ್ಥಕ್ಕೆ ಒಳಗಾಗಿ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.










