ದೇಶದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ಮುಲಾಜಿಲ್ಲದೆ ‘ಬಲಿ’ ಹಾಕಬೇಕು : ಮಾಜಿ ಸಿಎಂ ಹೆಚ್‍ಡಿಕೆ ಆಗ್ರಹ…

280
firstsuddi

ಬೆಂಗಳೂರು : ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ತೆರಳಿದ್ದ ಪೊಲೀಸರ ಮೇಲೆ ಜನರು ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡಲೇ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಕಳುಹಿಸಲು ಮುಂದಾಗಿದ್ದ ಪೊಲೀಸರು, ವೈದ್ಯಕೀಯ, ಬಿಬಿಎಂಪಿ ಸಿಬ್ಬಂದಿಗಳ ಮೇಲೆ ಉದ್ರಿಕ್ತ ಗುಂಪು ಹಲ್ಲೆ ನಡೆಸಿರುವುದು ಖಂಡನೀಯ. ಮುಲಾಜಿಲ್ಲದೆ ಅಂಥವರ ವಿರುದ್ಧ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸಬೇಕು. ದೇಶದ ಸ್ವಾಸ್ಥ್ಯಕ್ಕಿಂತ ಬೇರಾವುದೂ ಮುಖ್ಯವಲ್ಲ. ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದು. ಕಾನೂನು ಕೈಗೆತ್ತಿಕೊಂಡು ಗೂಂಡಾಗಿರಿ, ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧ. ಯಾವುದೇ ಧರ್ಮದವರಿರಲಿ ಈ ದೇಶದ ಕಾನೂನಿಗೆ ತಲೆ ಬಾಗಿಸಬೇಕು. ಇಂತಹ ಅತಿರೇಕದ ಹುಚ್ಚಾಟಗಳನ್ನು ಯಾರೂ ಪ್ರದರ್ಶಿಸಕೂಡದು. ದೇಶದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ಮುಲಾಜಿಲ್ಲದೆ ‘ಬಲಿ’ ಹಾಕಬೇಕು. ಇಡೀ ಜಗತ್ತು ಎದುರಿಸುತ್ತಿರುವ ಕರೋನಾ ವೈರಸ್ ವಿರುದ್ಧ ಜನತೆ ಸಂಘರ್ಷ ಮಾಡುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಧರ್ಮದ ಗುರಾಣಿಯನ್ನು ಅಡ್ಡ ತಂದು ವ್ಯವಸ್ಥೆ ಬುಡಮೇಲು ಮಾಡುವುದನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ. ಪೊಲೀಸರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಆಡಳಿತ ವ್ಯವಸ್ಥೆಯ ನೈತಿಕ ಬಲ ಕುಗ್ಗಿಸುವ ಮತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿ ದಂಗೆ ಏಳುವವರ ಹೆಡೆಮುರಿ ಕಟ್ಟಬೇಕು ಎಂದು ಆಗ್ರಹಿಸಿದ್ದಾರೆ.