ವಿರಾಟ ಪರ್ವಂ ಸಿನಿಮಾದ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ನಟಿ ಸಾಯಿ ಪಲ್ಲವಿ ನೀಡಿದ ಹೇಳಿಕೆಗೆ ಪರ, ವಿರೋಧ ವ್ಯಕ್ತವಾಗುತ್ತಿದೆ. ಧರ್ಮ ಮತ್ತು ದೇವರ ಹೆಸರಿನಲ್ಲಿ ಮನುಷ್ಯರ ಮೇಲೆ ಹಲ್ಲೆ ಮಾಡುವುದು ತಪ್ಪು ಎಂದು ಹೇಳಿದ್ದ ಸಾಯಿ ಪಲ್ಲವಿ, ದಿ ಕಾಶ್ಮೀರ್ ಫೈಲ್ಸ್ ಚಿತ್ರ ಹಾಗೂ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆಯನ್ನು ಹೋಲಿಕೆ ಮಾಡಿದ್ದರು. ಸಾಯಿ ಪಲ್ಲವಿ ಅವರ ಈ ಹೇಳಿಕೆಯನ್ನು ನಟಿ, ಮಾಜಿ ಸಂಸದೆ ರಮ್ಯಾ ಬೆಂಬಲಿಸಿದ್ದಾರೆ. ಸಾಯಿ ಪಲ್ಲವಿಗೆ ಸತ್ಯವನ್ನ ಮಾತನಾಡುವ ಶಕ್ತಿ ಇದೆ ಎಂದು ಬರೆದು, ಚಪ್ಪಾಳೆ ಚಿನ್ಹೆ ಮೂಲಕ ಬೆಂಬಲಕ್ಕೆ ನಿಂತಿದ್ದಾರೆ.
ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ ಅವರು ಮಾತನಾಡುತ್ತಾ, ‘ನಾನು ಎಡ ಮತ್ತು ಬಲ ಅಂತ ಕೇಳಿದ್ದೇನೆ. ಆದರೆ ಎರಡರ ಬಗ್ಗೆಯೂ ನನಗೆ ಆಳವಾದ ಜ್ಞಾನವಿಲ್ಲ. ಆದರೆ ನಾನು ಮನುಷ್ಯತ್ವದ ಪರ ಮಾತನಾಡುತ್ತೇನೆ. ನನ್ನ ಮನೆಯಲ್ಲಿ ಕಲಿಸಿದ್ದು ನ್ಯೂಟ್ರಲ್ ನಿಯಮ. ಹಾಗಾಗಿ ಕಾಶ್ಮೀರದಲ್ಲಿ ಪಂಡಿತರ ಹತ್ಯೆಯನ್ನು ಹೇಗೆ ಧಾರ್ಮಿಕ ದೃಷ್ಟಿಕೋನದಿಂದ ನೋಡಲಾಯಿತೋ, ಹಾಗೆಯೇ ಲಾಕ್ ಡೌನ್ ಸಮಯದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಟೆಂಪೋ ಟ್ರೈವರ್ ಮೇಲೆ ಜೈ ಶ್ರೀರಾಮ್ ಎಂದು ಹೇಳುತ್ತಾ ಕೊಚ್ಚಿಕೊಂದ ಘಟನೆಯನ್ನೂ ನಾನು ಹಾಗೆಯೇ ನೋಡಬೇಕಾಗುತ್ತದೆ. ನೀವು ಧಾರ್ಮಿಕ ಸಂಘರ್ಷದ ಕುರಿತು ಮಾತನಾಡುವುದಾದರೆ, ಈ ಎರಡರ ಮಧ್ಯೆ ವ್ಯತ್ಯಾಸ ಏನಿದೆ? ಅದು ಆವತ್ತು ನಡೆದಿದೆ. ಇದು ಇವತ್ತು ನಡೆದಿದೆ, ಅಷ್ಟೇ ಮತ್ತೇನು ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ. ಈ ಮಾತು ಇದೀಗ ವೈರಲ್ ಆಗುತ್ತಿದೆ.
ನಟಿ ಸಾಯಿ ಪಲ್ಲವಿಯ ಮಾತಿಗೆ ಪರ ವಿರೋಧ ವ್ಯಕ್ತವಾಗಿದೆ. ಕೆಲವು ಟ್ವಿಟರ್ ಬಳಕೆದಾರರು ಆಕೆಯ ಧೈರ್ಯವನ್ನು ಶ್ಲಾಘಿಸಿದರೆ, ಇತರರು ಅವರನ್ನು ಟ್ರೋಲ್ ಮಾಡಿದ್ದಾರೆ.










