ಖ್ಯಾತ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿದೇವಮ್ಮ(85) ಅವರು ನಿಧನರಾಗಿದ್ದಾರೆ.
ನಟ ಶಕ್ತಿಪ್ರಸಾದ್ ಅವರ ಪತ್ನಿಯಾಗಿರುವ ಲಕ್ಷ್ಮಿದೇವಮ್ಮ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ 2 ವರ್ಷದ ಹಿಂದೆ ನಟ ಚಿರಂಜೀವಿ ಸರ್ಜಾ ನಿಧನರಾಗಿದ್ದರು. ಇದೀಗ ಲಕ್ಷ್ಮಿದೇವಮ್ಮ ಅವರು ವಿಧಿವಶರಾಗಿದ್ದು, ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಗಿದೆ.
ಮೂಲಗಳ ಪ್ರಕಾರ ಲಕ್ಷ್ಮೀ ದೇವಮ್ಮ ಅವರ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಸಿದ್ದತೆ ಮಾಡಿಕೊಂಡಿದ್ದು, ಪಾರ್ಥಿವ ಶರೀರವನ್ನು ಜಯನಗರದ ಅಪೋಲೋ ಆಸ್ಪತ್ರೆಯಿಂದ ಅರ್ಜುನ್ ಸರ್ಜಾ ಅವರ ನಿವಾಸಕ್ಕೆ ಶಿಫ್ಟ್ ಮಾಡಲು ಸಿದ್ದತೆ ನಡೆಸಲಾಗಿದೆ. ತಾಯಿಯ ಆರೋಗ್ಯದಲ್ಲಿ ಏರು ಪೇರು ಉಂಟಾದ ಹಿನ್ನಲೇ ಅರ್ಜುನ್ ಸರ್ಜಾ ಬೆಂಗಳೂರಿನಲ್ಲಿಯೇ ಕಳೆದ ಕೆಲ ದಿನಗಳಿಂದ ಇದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
 
            
 
		








