ಬೆಂಗಳೂರು : ರಾಷ್ಟ್ರೀಯ ಹೆದ್ದಾರಿ 75- ಶಿರಾಡಿ ಘಾಟ್ ಮತ್ತು ಎನ್ ಎಚ್ 276 -ಸಂಪಾಜೆ ಘಾಟ್ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನಲೆಯಲ್ಲಿ ಜುಲೈ 26 ರಿಂದ ಮೈಸೂರು ಮೂಲಕ ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ವ್ಯವಸ್ಥೆ ಕಲ್ಪಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಜುಲೈ 22 ರಂದು ನೈಋತ್ಯ ರೈಲ್ವೆ ಬಿಡುಗಡೆಗೊಳಿಸಿರುವ ಅಧಿಸೂಚನೆಯ ಪ್ರಕಾರ ರೈಲು ಸಂಖ್ಯೆ 06547/548 ಬೆಂಗಳೂರು-ಮಂಗಳೂರು ಸೆಂಟ್ರಲ್ ತ್ರಿ-ಸಾಪ್ತಾಹಿಕ ವಿಶೇಷ ರೈಲು ಜುಲೈ 26 ರಿಂದ ಆಗಸ್ಟ್ 31 ರವರೆಗೆ ಸಂಚರಿಸಲಿದೆ. ರೈಲು ಸಂಖ್ಯೆ 06547 ಬೆಂಗಳೂರು-ಮಂಗಳೂರು ಸೆಂಟ್ರಲ್ ತ್ರಿ-ಸಾಪ್ತಾಹಿಕ ವಿಶೇಷ ರೈಲು ಭಾನುವಾರ, ಮಂಗಳವಾರ ಮತ್ತು ಗುರುವಾರದಂದು ರಾತ್ರಿ 8.30 ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಮರುದಿನ ಬೆಳಿಗ್ಗೆ 9.05 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ರೈಲು ಸಂಖ್ಯೆ 16585 ಬೆಂಗಳೂರು-ಮಂಗಳೂರು ಸೆಂಟ್ರಲ್ ತ್ರಿ-ಸಾಪ್ತಾಹಿಕ ವಿಶೇಷ ರೈಲು ಆಗಸ್ಟ್ 30ರವರೆಗೆ ಮೈಸೂರಿನಿಂದ ರಾತ್ರಿ 11.15ಕ್ಕೆ ಮತ್ತು ಹಾಸನದಿಂದ ಬೆಳಿಗ್ಗೆ 1.45ಕ್ಕೆ ಹೊರಡುತ್ತದೆ. ಈ ರೈಲಿಗೆ ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಕೆಆರ್ ನಗರ, ಹೊಳೆನರಸೀಪುರ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ ಮತ್ತು ಮಂಗಳೂರು ಜಂಕ್ಷನ್ ನಲ್ಲಿ ಸ್ಟಾಪ್ ಇರಲಿದೆ.
ಹಾಗೇ, ರೈಲು ಸಂಖ್ಯೆ 06548 ಮಂಗಳೂರು ಸೆಂಟ್ರಲ್-ಬೆಂಗಳೂರು ತ್ರಿ-ಸಾಪ್ತಾಹಿಕ ವಿಶೇಷ ರೈಲು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಜೆ 6.35ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಮರುದಿನ ಬೆಳಿಗ್ಗೆ 6.15ಕ್ಕೆ ರೈಲು ಸಂಖ್ಯೆ 16586 ಮಂಗಳೂರು ಸೆಂಟ್ರಲ್ ನ ಮಾರ್ಗ ಮತ್ತು ಸಮಯಗಳಲ್ಲಿ ಬೆಂಗಳೂರು ತಲುಪುತ್ತದೆ. ಬೆಂಗಳೂರು ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ಆಗಸ್ಟ್ 31ರವರೆಗೆ ಕಾರ್ಯ ನಿರ್ವಹಿಸಲಿದೆ. ಇದು ಹಾಸನದಿಂದ 12.40ಕ್ಕೆ ಮತ್ತು ಮೈಸೂರಿನಿಂದ 3.15ಕ್ಕೆ ಹೊರಡುತ್ತದೆ.
ಜುಲೈ 17ರಿಂದ ಶಿರಾಡಿ ಘಾಟ್ ಮತ್ತು ಸಂಪಾಜೆ ಘಾಟ್ ಸಂಪರ್ಕ ಕಡಿತಗೊಂಡಾಗಿನಿಂದ ಕರಾವಳಿ ಮತ್ತು ಬೆಂಗಳೂರು ನಡುವೆ ವಿಶೇಷ ರೈಲುಗಳನ್ನು ಓಡಿಸಲು ಮತ್ತು ಅಸ್ತಿತ್ವದಲ್ಲಿರುವ ರೈಲುಗಳಿಗೆ ಹೆಚ್ಚುವರಿ ಕೋಚ್ ಗಳನ್ನು ಸೇರಿಸಲು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆಗೆ ಒತ್ತಾಯಿಸಿದ್ದರು. ಈ ಸಂಬಂಧ ಜುಲೈ 18ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನಳೀನ್ ಕುಮಾರ್ ಕಟೀಲ್ ಪತ್ರ ಬರೆದಿದ್ದರು.










