ಬಹುಕೋಟಿ ವಂಚನೆಯ ಆರೋಪಿ ಆಗಿರುವ ಸುಖೇಶ್ ಚಂದ್ರಶೇಖರ್ ಕಡೆಯಿಂದ ದುಬಾರಿ ಬೆಲೆಯ ಗಿಫ್ಟ್ ಪಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಿನ್ನೆ ಕೋರ್ಟ್ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು. ಈ ವೇಳೆ ನಟಿ ಆತನ ಸ್ನೇಹದಿಂದಾಗಿ ನೆಮ್ಮದಿ ಕಳೆದುಕೊಂಡೆ ಹಾಗೂ ಅವನು ನನ್ನ ಭಾವನೆಗಳೊಂದಿಗೆ ಆಟವಾಡಿ, ಜೀವನವನ್ನೇ ನರಕ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ಸುಖೇಶ್ ತಮಗೆ ಪರಿಚಯವಾಗಿದ್ದು ಪಿಂಕಿ ಇರಾನಿ ಎನ್ನುವ ಮಹಿಳೆಯಿಂದ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ. ಪಿಂಕಿ ಇರಾನಿ ಸುಖೇಶ್ ನನ್ನು ಗೃಹ ಸಚಿವಾಲಯದ ಅಧಿಕಾರಿ ಎಂದು ಪರಿಚಯಿಸಿದರು. ಈ ಪರಿಚಯ ಸ್ನೇಹವಾಯಿತು. ಆತ್ಮೀಯತೆ ಬೆಳೆಯಿತು. ಸುಖೇಶ್ ನಿಂದ ಕೆಲವು ಗಿಫ್ಟ್ ಗಳು ಬಂದಿದ್ದು ಪಿಂಕಿ ಇರಾನಿ ಕಡೆಯಿಂದ ಎಂದಿದ್ದಾರೆ.
ನಾನು ನಿಮ್ಮ ದೊಡ್ಡ ಫ್ಯಾನ್ ಎಂದು ಚಂದ್ರಶೇಖರ್ ಹೇಳಿದ್ದ. ನನ್ನ ಬಳಿ ದಕ್ಷಿಣ ಭಾರತದಲ್ಲಿ ಸಿನಿಮಾ ಮಾಡುವಂತೆ ಹೇಳಿದ್ದ. ಸನ್ ಟಿವಿ ಮಾಲೀಕ ಆಗಿರುವುದರಿಂದ ಹಲವು ಪ್ರಾಜೆಕ್ಟ್ ಗಳು ಲೈನಪ್ ಆಗಿವೆ. ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಆತ ಹೇಳಿದ್ದ. ಸುಕೇಶ್ ನನ್ನ ದಾರಿ ತಪ್ಪಿಸಿದ. ನನ್ನ ಜೀವನ ಹಾಗೂ ವೃತ್ತಿಜೀವನವನ್ನು ಆತ ಹಾಳು ಮಾಡಿದ ಎಂದು ಕೋರ್ಟ್ನಲ್ಲಿ ಜಾಕ್ವೆಲಿನ್ ಹೇಳಿದ್ದಾರೆ.
ಸುಕೇಶ್ ಅರೆಸ್ಟ್ ಆದ ನಂತರವೇ ಆತನ ನಿಜವಾದ ಹೆಸರು ನನಗೆ ಗೊತ್ತಾಗಿತ್ತು. ಆತ ಮಾಡುತ್ತಿದ್ದ ಕೆಲಸಗಳ ಬಗ್ಗೆ ಗೊತ್ತಾಯಿತು. ಸುಖೇಶ್ ಬಗ್ಗೆ ವಿಷಯ ಗೊತ್ತಿದ್ದರೂ, ಆಕೆ ನನ್ನಿಂದ ಎಲ್ಲವನ್ನೂ ಮುಚ್ಚಿಟ್ಟರು ಎಂದು ಜಾಕ್ವೆಲಿನ್ ಹೇಳಿದ್ದಾರೆ.
ಜನವರಿ 27ಕ್ಕೆ ಕೆಲಸದ ನಿಮಿತ್ತ ದುಬೈಗೆ ಹಾರಲು ಅವಕಾಶ ನೀಡಬೇಕು ಎಂದು ಜಾಕ್ವೆಲಿನ್ ಕೋರಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ನೋಟಿಸ್ ನೀಡಿದ್ದು, ಈ ಸಂಬಂಧ ಪ್ರತಿಕ್ರಿಯಿಸುವಂತೆ ಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡಲಾಗಿದೆ.










