ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ನಡುವೆಯೂ ಶಾಸಕ ಅರವಿಂದ ಬೆಲ್ಲದ್ ಅವರು ನನ್ನ ಫೋನ್ ನನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ನನ್ನ ಪೋನ್ ಕದ್ದಾಲಿಕೆ ಮಾಡಲಾಗುತ್ತಿದೆ, ನನ್ನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ. ಕೆಲವು ದಿನದ ಹಿಂದೆ ಒಬ್ಬರು ಕಾಲ್ ಮಾಡಿ ನಾನು ಸ್ವಾಮಿ ಅಂದ್ರು, ಯಾವ ಸ್ವಾಮೀಜಿ ಅಂದರೆ ಯುವರಾಜ ಸ್ವಾಮೀಜಿ ಅಂದರು. ನನಗೆ ಅವರ ಜೊತೆಗಿನ ಮಾತುಕತೆ ಅನುಮಾನಾಸ್ಪದವಾದ ಕಾರಣ ಕರೆ ಕಟ್ ಮಾಡಿದೆ.
ಬೇರೆ ನಂಬರ್ ನಿಂದ ಮತ್ತೆ ಕಾಲ್ ಮಾಡಿದರು. ಅನಾವಶ್ಯಕವಾಗಿ ಜೈಲಿಗೆ ಹಾಕಿದ್ದಾರೆ ಎಂದರು. ನನಗೆ ಅನುಮಾನ ಬಂದು ಮಾತು ನಿಲ್ಲಿಸಿ ಕರೆ ಕಟ್ ಮಾಡಿದೆ. ಇದೆಲ್ಲಾ ನೋಡಿದರೆ ಈ ಕಾಲ್ ಹಿಂದೆ ಷಡ್ಯಂತ್ರ ಇದೆ. ನಮ್ಮ ತಂದೆ ಚಂದ್ರಕಾಂತ್ ಬೆಲ್ಲದ್ ಅವರು ಐದು ಬಾರಿ ಶಾಸಕ ಆದರೂ ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣ ಮಾಡಿದರು.ನಾನು ಅವರ ಮಾರ್ಗದಲ್ಲಿ ಹೋಗುತ್ತಿದ್ದೇನೆ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತೆ. ನನ್ನ ಫೋನ್ ಕೂಡ ಟ್ಯಾಪ್ ಆಗಿದೆ. ಈ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರದ ಮೂಲಕ ದೂರು ನೀಡಿರುವುದಾಗಿ ತಿಳಿಸಿದರು.
ಕಳೆದ ಒಂದು ತಿಂಗಳಿನಿಂದ ಈ ರೀತಿ ಆಗುತ್ತಿದೆ. ಹೊಸ ರೀತಿಯ ತಂತ್ರಜ್ಞಾನ ಮಾಡಿ ಟೆಲೆಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ, ಇದರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.










