ನವೆಂಬರ್ ಅಂತ್ಯದವರೆಗೂ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮುಂದುವರಿಕೆ : ಪ್ರಧಾನಿ ಮೋದಿ.

143
firstsuddi

ನವದೆಹಲಿ : ದೇಶಾದ್ಯಂತ ಇಂದಿಗೆ ಕೊರೊನಾ ಅನ್‍ಲಾಕ್-1 ಮುಕ್ತಾಯವಾಗಿ ನಾಳೆಯಿಂದ ಅನ್‍ಲಾಕ್-2 ಆರಂಭವಾಗಲಿದ್ದು, ಈ ಕುರಿತು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೊದಿ ಅವರು ಮಾತನಾಡಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಾ ಹೋರಾಡುತ್ತಾ ಈಗಾ ಅನ್‍ಲಾಕ್ 2ಕ್ಕೆ ಪ್ರವೇಶ ಮಾಡಿದ್ದೇವೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ನೋಡಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಬೇರೆ ದೇಶಗಳಿಗೆ ಹೋಲಿಸಿದರೆ ನಾವು ನಮ್ಮ ದೇಶದಲ್ಲಿ ಸರಿಯಾದ ಸಮಯದಲ್ಲಿ ಲಾಕ್‍ಡೌನ್ ಮಾಡಿದ್ದೇವೆ. ಹೀಗಾಗಿ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ನವೆಂಬರ್ ವರೆಗೆ ಉಚಿತ ಪಡಿತರ ನೀಡುವುದಾಗಿ ತಿಳಿಸಿದ್ದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ತಿಂಗಳ ಅಂತ್ಯದವರೆಗೂ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ 80 ಕೋಟಿಗೂ ಹೆಚ್ಚು ಬಡ ಕುಟುಂಬಕ್ಕೆ ಅನೂಕೂಲವಾಗಲಿದೆ. ಬಡ ಕುಟುಂಬದ ಎಲ್ಲರಿಗೂ ಪ್ರತಿ ತಿಂಗಳು ಉಚಿತ ಪಡಿತರ ಸಿಗಲಿದೆ. 5 ಕೆ.ಜಿ. ಅಕ್ಕಿ ಅಥವಾ ಗೋದಿ, ಬೇಳೆ ಉಚಿತವಾಗಿ ನೀಡುತ್ತೇವೆ. ಈ ಯೋಜನೆ ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ವರೆಗೂ ಜಾರಿಯಲ್ಲಿರುತ್ತದೆ. ದೇಶದ ಎಲ್ಲರಿಗೂ ಒಂದೇ ರೇಷನ್ ಕಾರ್ಡ್ ನೀಡುವ “ಒನ್ ನೇಷನ್, ಒನ್ ರೇಷನ್ ಕಾರ್ಡ್” ಯೋಜನೆಯನ್ನು ಶೀಘ್ರ ಜಾರಿ ಮಾಡುತ್ತೇವೆ. ಇದಕ್ಕಾಗಿ ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂಪಾಯಿ ವ್ಯಯಿಸುತ್ತದೆ ಎಂದು ತಿಳಿಸಿದರು.

ಕೊರೋನಾ ವೈರಸ್ ಸೋಂಕನ್ನು ಜನರು ಹಗುರವಾಗಿ ತೆಗೆದುಕೊಳ್ಳಬಾರದು. ಅನ್​ಲಾಕ್ ಘೋಷಣೆ ಆದ ಬಳಿಕ ಜನರು ವೈಯಕ್ತಿಕವಾಗಿ ಬಹಳ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಮನಿಸಿದ್ದೇನೆ. ಇಂಥ ಧೋರಣೆ ತರವಲ್ಲ. ಜನರು ಕೊರೋನಾ ವೈರಸ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲಾಕ್​ಡೌನ್ ನಿಯಮಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಲಾಕ್ ಡೌನ್ ನಿಯಮಗಳಿಂದ ಪ್ರಧಾನಿ ಮೋದಿಯೂ ಹೊರತಲ್ಲ. ಯಾರೇ ಆದರೂ ಲಾಕ್​ಡೌನ್ ನಿಯಮ ಪಾಲಿಸದಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ಧಾರೆ.