ನವ ಜಾತ ಶಿಶು ಅಪಹರಣ ಪ್ರಕರಣ ಸಂಬಂಧ ಇಬ್ಬರು ಕಳ್ಳಿಯರ ಬಂಧನ.

31

ಕಲಬುರಗಿ: ಗುಲ್ಬುರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಮ್ಸ್ ನಲ್ಲಿ ಅಪಹರಣಗೊಂಡಿದ್ದ ನವ ಜಾತ ಶಿಶುವನ್ನು ರಕ್ಷಿಸುವಲ್ಲಿ ಕಲಬುರಗಿ ನಗರ ಪೊಲೀಸರು ಯಶಸ್ವಿಯಾಗಿದೆ. ಮಗು ಅಪಹರಣ ಮಾಡಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದು, ಕಂದಮ್ಮನನ್ನು ಸುರಕ್ಷಿತವಾಗಿ ಮತ್ತೆ ತಾಯಿ ಮಡಿಲಿಗೆ ಸೇರಿಸಿದ್ದಾರೆ. ಬಂಧಿತರನ್ನು ಹೆಚ್.ನಸ್ರೀನ್ ಮತ್ತು ಫಾತೀಮಾ ಎಂದು ಗುರುತಿಸಲಾಗಿದೆ. ಸೋಮವಾರ ಮುಂಜಾನೆ ಜಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ನರ್ಸ್ ಗಳ ಸೋಗಿನಲ್ಲಿ ಬಂದಿದ್ದ ಕಳ್ಳಿಯರು, ನವಜಾತ ಗಂಡು ಶಿಶುವನ್ನು ಅಪಹರಿಸಿ ಪರಾರಿಯಾಗಿದ್ದರು. ಇದು ರಾಜಾದ್ಯಂತ ಸುದ್ದಿಯಾಗುತ್ತಿದ್ದಂತೆಯೇ ಪೊಲೀಸರು ಹುಡುಕಾಟ ಆರಂಭಿಸಿದ್ದರು. ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ನೇತೃತ್ವದ ಪೊಲೀಸ್ ತಂಡ 36 ಗಂಟೆಗಳಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸುವ ಮೂಲಕ ಕಳ್ಳಿಯರನ್ನು ಬಂಧಿಸಿ ಮಗುವನ್ನು ಪತ್ತೆ ಹಚ್ಚಿದೆ. ಬಳಿಕ ಬುಧವಾರ ತಡರಾತ್ರಿ ಆಸ್ಪತ್ರೆಗೆ ಧಾವಿಸಿ, ತಾಯಿ ಮಡಿಲಿಗೆ ಮಗುವನ್ನು ಸೇರಿಸಿದೆ. ಈ ವೇಳೆ ಸಂತೋಷಗೊಂಡ ತಾಯಿ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.