ಮಂಡ್ಯ : ನಾನು ಮಂಡ್ಯ ಬಿಟ್ಟು ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ. ನಾನು ಮಂಡ್ಯ ಬಿಡುವ ಹಗಲುಗನಸನ್ನು ಕೆಲವರು ಕಾಣುತ್ತಿದ್ದಾರೆ. ಆ ಕನಸು ಯಾವತ್ತೂ ನನಸು ಆಗಲ್ಲ. ನಾನು ಎಂದಿಗೂ ಮಂಡ್ಯದಲ್ಲಿಯೇ ಇರುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಹಿನ್ನೆಲೆ ಸುಮಲತಾ ಅವರು ಇಂದು ಪ್ರಗತಿ ಪರಿಶೀಲನೆ ಹಾಗೂ ದಿಶಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಮಂಡ್ಯದ ರೈಲ್ವೆ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಶಪಥ ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬ ಆಗುತ್ತಿಲ್ಲ. ನಿಗದಿಯಂತೆ ದಸರಾ ವೇಳೆಗೆ ದಶಪಥ ಹೆದ್ದಾರಿ ಉದ್ಘಾಟನೆಯಾಗಲಿದೆ. ಅಲ್ಲಿಯವರೆಗೂ ಸಾರ್ವಜನಿಕರು ಸಹಕರಿಸಬೇಕು ಎಂದರು.
ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ. ನನಗೆ ರಾಜಕೀಯ ಅನಿವಾರ್ಯ ಅಲ್ಲ. ಮಂಡ್ಯ ಜನರ ಋಣವನ್ನು ತೀರಿಸಲು ನಾನು ರಾಜಕೀಯದಲ್ಲಿದ್ದೇನೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಅದಕ್ಕಾಗಿ ಕೆಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಈ ರೀತಿಯ ಚೀಪ್ ಗಿಮಿಕ್ಗಳನ್ನು ಈಗಲಾದರೂ ಬಿಡಿ. ಮಂಡ್ಯ ಅಭಿವೃದ್ಧಿ ಕಡೆಗೆ ಗಮನಹರಿಸೋಣಾ. ನನಗೆ ಅಧಿಕಾರದ ಆಸೆ ಇಲ್ಲ, ಹೀಗಾಗಿ ಯಾವುದೇ ಭಯ ನನಗಿಲ್ಲ ಎಂದಿದ್ದಾರೆ.
ಬಿಜೆಪಿಗೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ನಾನು ಸದ್ಯ ಯಾವ ಪಕ್ಷವನ್ನು ಸೇರ್ಪಡೆಯಾಗುವ ಆಲೋಚನೆ ಮಾಡಿಲ್ಲ. ಬೆಂಗಳೂರು ಉತ್ತರದಿಂದ ಟಿಕೆಟ್ ಕೇಳಿರುವುದು ಸುಳ್ಳು. ಇದೊಂದು ಹಾಸ್ಯಾಸ್ಪದ ಸುದ್ದಿ. ಈ ರೀತಿ ಕೆಲವರು ಮೂರ್ಖತನದ ಮಾತು ಹೇಳಿದ್ದಾರೆ. ನಾನು ಯಾವ ಪಕ್ಷದ ಮುಂದೆ ಬೇಡಿಕೆ ಇಟ್ಟಿಲ್ಲ. ನನ್ನ ಮಗನಿಗೂ ಟಿಕೆಟ್ ಬೇಡಿಕೆ ಇಟ್ಟಿಲ್ಲ. ಈಗ ಅಭಿ ಸಿನಿಮಾ ಕ್ಷೇತ್ರದಲ್ಲಿದ್ದಾನೆ. ಸದ್ಯ ಸಿನಿಮಾ ಕ್ಷೇತ್ರದಲ್ಲಿ ಅವನು ಬೆಳೆಯುತ್ತಿದ್ದಾನೆ. ನಾನು ಅವನಿಗಾಗಿ ರಾಜಕೀಯದ ಸ್ಟೂಲ್ ಹಾಕಿಕೊಡಲ್ಲ. ಅವನಿಗೆ ಬೇರೆ ಪಕ್ಷದಿಂದ ಆಫರ್ ಬಂದಿರುವುದು ನಿಜ. ಅದನ್ನು ನಿರ್ಧಾರ ಮಾಡುವುದು ಅಭಿಷೇಕ್ ಗೆ ಬಿಟ್ಟಿದ್ದು. ಈ ವಿಚಾರದಲ್ಲಿ ನಾನು ನಿರ್ಧಾರ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.










