ಬೆಂಗಳೂರು : ಹೈದರಾಬಾದ್‍ನ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್‍ಕೌಂಟರ್ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ನಟ ಹಾಗೂ ಪ್ರಜಾಕೀಯ ಪಕ್ಷದ ನಾಯಕ ಉಪೇಂದ್ರ ಅವರು ಮಾಡಿದ್ದ ಟ್ವೀಟ್‍ಗೆ ಉಪೇಂದ್ರ ಅವರು “ಅತ್ಯಾಚಾರಿಗಳ ಪರ” ಎಂದು ಹಲವು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಟ್ವೀಟ್ ಬಗ್ಗೆ ಆಕ್ರೋಶ ಹೊರಹಾಕಿದವರಿಗೆ ಉಪೇಂದ್ರ ಅವರು ಮತ್ತೊಂದು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. “ಎನ್ಕೌಂಟರ್ಗಳು ಪ್ರಭಾವಿಗಳಿಂದ ದುರುಪಯೋಗವಾಗಬಾರದು, ನ್ಯಾಯಾಂಗ ವ್ಯವಸ್ಥೆಯನ್ನು ಸರ್ಕಾರ ಚುರುಕುಗೊಳಿಸಬೇಕು ಎಂಬದಷ್ಟೇ ನನ್ನ ಉದ್ದೇಶವಾಗಿತ್ತು ನಾನೂ ಒಂದು ಹೆಣ್ಣು ಮಗುವಿನ ತಂದೆ, ಅತ್ಯಾಚಾರಿಗಳ ಪರವಾಗಿ ಮಾತನಾಡಿದೆ ಎಂದು ಬಿಂಬಿಸುವಂತಹ ಹ್ಯೇಯ ಮನಸಿನ ಜನ ಈ ಸಮಾಜದಲ್ಲಿ( ಕೆಲವರು ನನ್ನ ಜೊತೆಗೇ ) ಇದ್ದಾರಲ್ಲ ಎಂದು ನೋವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಉಪೇಂದ್ರ ಅವರು ಈ ಹಿಂದೆ ಮಾಡಿದ್ದ ಟ್ವೀಟ್‍ನಲ್ಲಿ “ಈ ನಾಲ್ಕು ಹುಡುಗರೇ ಆಕೆಯನ್ನು ರೇಪ್ ಮಾಡಿ ಸುಟ್ಟುಹಾಕಿದ್ದಾರೋ ಇಲ್ಲ ಇದರ ಹಿಂದೆ ಬೇರೆ ಯಾರೋ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೊ ? ಈ ರೀತಿಯ ಎನ್ಕೌಂಟರ್ರ್ ಪ್ರಮುಖ ವ್ಯಕ್ತಿಗಳ ಕೇಸ್ನಲ್ಲಿ ಯಾಕಾಗುವುದಿಲ್ಲ? ಕೋರ್ಟನಲ್ಲಿ ವಿಚಾರಣೆಗೂ ಮುನ್ನ ನಡೆದ ಈ ಎನ್ಕೌಂಟರ್ ಇನ್ನು ಮುಂದೆ ಪ್ರಭಾವಶಾಲೀ ಭ್ರಷ್ಟ ರೇಪಿಷ್ಟ್ ಗಳಿಗೆ ರತ್ನಗಂಬಳಿಯಾಗುವುದೇ ? ಒಂದು ಕಾಲದಲ್ಲಿ ಇದೇ ರೀತಿ ಎನ್ಕೌಂಟರ್ ಮಾಡಿ ರೌಡಿಸಂಗೆ ಕಡಿವಾಣ ಹಾಕಿದ ಹಾಗೆ, ನಿಷ್ಠಾವಂತ ಪೋಲೀಸ್ ಅಧಿಕಾರಿಗಳು ಮನಸು ಮಾಡಿದರೆ ಎನ್ಕೌಂಟರ್ ಮೂಲಕ ಈ ಅತ್ಯಾಚಾರದ ಪಿಡುಗನ್ನು ನಿರ್ಮೂಲ ಮಾಡಬಹುದು. ಆದರೆ ಇದನ್ನು ಹಣವಂತರು, ಪ್ರಭಾವಿಗಳು ದುರುಪಯೋಗ ಮಾಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.













