ಮಂಗಳೂರು : ನಾಪತ್ತೆಯಾಗಿದ್ದ ಬಾಲಕನೋರ್ವನ ಮೃತದೇಹ ನಗರದ ಹೊಯಿಗೆಬಜಾರ್ ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಪತ್ತೆಯಾಗಿದೆ.
ನಗರದ ಮಹಾಕಾಳಿಪಡ್ಪುವಿನ ಚೆನ್ನಪ್ಪ ಎಂಬವರ ಪುತ್ರ ದೃಶ್ಯಂತ್ (16) ಮೃತಪಟ್ಟ ಬಾಲಕ. ಭಾನುವಾರ ರಜೆ ಇದ್ದ ಕಾರಣ ಮಹಾಕಾಳಿಪಡ್ಪು ಮೈದಾನದಲ್ಲಿ ಕ್ರಿಕೆಟ್ ಮ್ಯಾಚ್ ಗೆ ಹೋಗಿ ಅಲ್ಲಿ ಅಪರಾಹ್ನ 3.30ರವರೆಗೆ ಕಾಮೆಂಟ್ರಿ ಮಾಡುತ್ತಿದ್ದ. ಅನಂತರ ಆತ ಸ್ನೇಹಿತರ ಜತೆಗೆ ಅಲ್ಲಿಂದ ತೆರಳಿದ್ದು, ಬಳಿಕ ಮನೆಗೆ ಬಂದಿರಲಿಲ್ಲ. ಮನೆಯವರು ಎಲ್ಲ ಕಡೆ ಹುಡುಕಾಡಿ ಪತ್ತೆಯಾಗದ ಕಾರಣ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಆದರೆ ನಿನ್ನೆ ಸಂಜೆ ಬಾಲಕನ ಮೃತದೇಹ ಹೊಯಿಗೆಬಜಾರ್ ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಪತ್ತೆಯಾಗಿದೆ. ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










